ಈ ವಿಚಾರ ನಂಬಿದರೆ ನಂಬಿ ಬಿಟ್ಟರೆ ಬಿಡಿ, ವಿಚಿತ್ರ ಅನಿಸಿದರು ಇದು ಸತ್ಯ ಪ್ರಾಮಾಣಿಸಿ ನೋಡಬೇಕಾದರೆ ಒಮ್ಮೆ ಬೇಟಿ ಕೊಟ್ಟು ನೋಡಿ ಕಾರ್ಗಲ್ಲಿನ ಹಿರಿಯ ಸಮಾಜವಾದಿ ಹಾ ಸಾ ಹಸನ್ ರವರ ಮನೆಗೆ.
ಸಾಗರ ತಾಲ್ಲೂಕಿನ ಸಮಾಜವಾದಿ ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲೆಯ ಮರೆಯ ಕಾಯಿಯಂತೆ ಗುರುತಿಸಿ ಕೊಂಡ ಹಾ ಸಾ ಹಸನ್ ಕಾರ್ಗಲ್ ಈಗ ಮಸೀದಿ ರಸ್ತೆಯ ತಮ್ಮ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.ಇವರ ಮಕ್ಕಳೆಲ್ಲ ಉದ್ಯೋಗ, ವ್ಯವಹಾರಗಳೊಂದಿಗೆ ರಾಜಧಾನಿ,ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ.
ವಿಶ್ರಾಂತ ಜೀವನ ನಡೆಸುತ್ತಿರುವ ಹಸ್ಸನ್ ಸಾಹೇಬರಿಗೆ ಪರಿಸರ, ಪ್ರಕೃತಿ, ಪುಸ್ತಕಗಳ ಜೊತೆಗೆ ಭಾವನಾತ್ಮಕವಾಗಿ ಜೀವನ ನಡೆಸುವ ಸಾಹೇಬರು..ಧರ್ಮ ಪತ್ನಿ ಜೈಬುನ್ನಿಸ ರೊಂದಿಗೆ ನೆಮ್ಮದಿಯ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ದಂಪತಿಗಳ ಮಕ್ಕಳಾದ ಮನ್ಸೂರ್, ಹಯಾತ್, ಸಾದಿಕ್, ರೇಶ್ಮ ಬಷೀರ್, ಕುಟುಂಬ ವರ್ಗದೊಂದಿಗೆ ಆಗಾಗ ಬಂದು ತಂದೆ ತಾಯಿಯ ಕ್ಷೇಮ ಸಮಾಚಾರ ವಿಚಾರಿಸಿ ಕೊಂಡು ಹೋಗುತ್ತಿದ್ದರು. ಬೆಂಗಳೂರಿನ ಮೊಮ್ಮಕ್ಕಳಾದ ಮಿಶಾಲ್, ಮನಾಲ್ ಮತ್ತು ಫಾತಿಮಾ ಬರುವಾಗ ಪುಟ್ಟ ಕೋಳಿ ಮರಿಯನ್ನುತಮ್ಮ ಬಳಿ ಇಟ್ಟುಕೊಂಡು ವಾಪಾಸು ಹೋಗುವಾಗ ತಮ್ಮ ಸಂಗಡ ತೆಗೆದು ಕೊಂಡು ಹೋಗಿ ಬಿಡುತ್ತಿದ್ದರು.
ಆದರೆ ಅದೊಂದು ದಿನ ಕಾರಿನಲ್ಲಿ ಕುಟುಂಬ ಹೊರಟಾಗ ಪರಿಸರ ಪ್ರೇಮಿಯಾದ ಹಸನ್್ ಸಾಹೇಬರು ಹುಂಜ ಮರಿಯನ್ನು ಇಲ್ಲೆ ಬಿಟ್ಟು ಹೋಗ್ರೋ, ಅದಕ್ಕೆ ಬೇಕಾದ ಕಾಳು ಕಡ್ಡಿ , ಗೆದ್ದಲು ಹುಳುಗಳು ಹೇರಳವಾಗಿ ಮಲೆನಾಡ ಸ್ವರ್ಗ ಸೀಮೆಯಾದ ಕಾರ್ಗಲ್ ನಲ್ಲಿ ದೊರೆಯುವುದರಿಂದ, ಮನೆಯಲ್ಲೇ ಬಿಟ್ಟು ಹೋಗಿಬಿಡು ಎಂದು ಸಲಹೆ ನೀಡಿದರು. ಅಜ್ಜನ ಸಲಹೆಯಂತೆ ಮೊಮ್ಮಗ ಮಿಶಾಲ್ ಒಲ್ಲದ ಮನಸ್ಸಿನಿಂದ ಬಿಟ್ಟು ಹೋದ.ಆದರೆ ಹೋದ ನಂತರ ಪ್ರತಿ ದಿವಸ ಬೆಂಗಳೂರಿನಿಂದ ಅಜ್ಜನಿಗೆ ದೂರವಾಣಿ ಮೂಲಕ ಕೋಳಿಯ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದ. ಹೀಗೆ ದಿನ ಕಳೆದು
ನಂತರದ ದಿನಗಳಲ್ಲಿ ಮರಿ ಹುಂಜ ಬೆಳೆದು ದೊಡ್ದವನಾದ. ಈಗ ಈ ಹುಂಜ ಬೆಳಿಗ್ಗೆ ಆಗುತ್ತಿದ್ದಂತೆ ಪ್ರಧಾನ ಬಾಗಿಲ ಬಳಿ ಬಂದು ನಿಂತು ಬಿಡುತ್ತಾನೆ.
ನಂತರದ ಕತೆಯೇ ಬೇರೆ. ಮನೆಗೆ ಅಪರಿಚಿತರು ಯಾರು ಬರುವಂತೆ ಇಲ್ಲ. ಈತನಿಗೆ ಸ್ವಲ್ಪ ಅನುಮಾನ ಬಂದರೂ ಸಾಕು ಹಾರಿ ಕುಕ್ಕಿ ಬಿಡುತ್ತಾನೆ.ಈತ ಕುಕ್ಕುವ ವಿಚಾರ ತಿಳಿದು ಈಗ ಮನೆ ಕೆಲಸದವರು, ಹಾಲು ಕೊಡುವವರು, ಪೇಪರ್ ಹಾಕುವವರು, ಕರೆಂಟ್ ಬಿಲ್ ಕೊಡುವವರು, ಎಲ್ಲರೂ ಹೆದರುತ್ತಾರೆ. ಆದರೆ ತನ್ನನ್ನು ಸಾಕಿದ ಹಸನ್ ಸಾಹೇಬ್ ದಂಪತಿಗಳಿಗೆ ಮಾತ್ರ ತಲೆ ಬಾಗಿ ವಿನೀತನಾಗಿ ತನ್ನ ಮೈಯನ್ನು ಅವರ ಕಾಲಿಗೆ ಸವರುತ್ತಾ ತನ್ನ ಸ್ವಾಮಿ ನಿಷ್ಟೆಯನ್ನು ಪ್ರದರ್ಶಿಸುತ್ತಾನೆ.
ಬಹುಶಃ ಈತನಿಗೆ ಅದ್ಯಾವುದೋ ದೈವಿಕ ಶಕ್ತಿಯ ಒಲುಮೆ ಇರಬಹುದೇನೋ ಎಂದನಿಸುತ್ತದೆ. ಏಕೆಂದರೆ ಈತ ಬೆಂಗಳೂರಿನಲ್ಲಿರುವಾಗ ಸಾಕಷ್ಟು ಬಾರಿ ಎರಡನೇ ಅಂತಸ್ತಿನ ಕಟ್ಟಡದ ಮೇಲಿನಿಂದ ಕೆಳಗೆ ಆಕಸ್ಮಿಕವಾಗಿ ವಾಹನಗಳ ಸಂಚಾರ ಜಾಸ್ತಿಯಿರುವ ರಸ್ತೆಯಲ್ಲಿ ಬಿದ್ದು ಪಾರಾಗಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ ಬೆಕ್ಕು ಮತ್ತು ನಾಯಿ ಬಾಯಿಗೆ ತುತ್ತಾಗುವ ಸಾಕಷ್ಟು ಸಂದರ್ಭಗಳು ಇವನಿಗೆ ಎದುರಾಗಿವೆ. ಒಮ್ಮೆ ಈತನನ್ನು ಸಮೀಪದ ಇಡುವಾಣಿ ಗ್ರಾಮದ ಮೀಸೆ ಮಾಮನೊಬ್ಬ ಹಿಡಿದು ಕದ್ದು ಮಾರಿಬಿಟ್ಟ. ಆಶ್ಚರ್ಯಕರ ರೀತಿಯಲ್ಲಿ ಈತ ಸಂಜೆಯಾಗುವುದರೊಳಗಾಗಿ ವಾಪಾಸು ಬಂದು ಮನೆ ಸೇರಿಕೊಂಡಿದ್ದ. ಒಟ್ಟಾರೆ ಸಾವನ್ನು ಸಾಕಷ್ಟು ಬಾರಿ ಸಮೀಪದಿಂದ ಕಂಡು ವಾಪಸ್ಸಾದ ಮೃತ್ಯುಂಜಯನಂತೆ ಇಂದು ಓಡಾಡಿಕೊಂಡಿದ್ದಾನೆ.
ನಾವುಗಳು ನಾಯಿ ಮನೆ ಕಾಯುವುದನ್ನು ಕೇಳಿದ್ದೇವೆ..ಆದರೆ ಕೋಳಿ ಕಾಯುವುದು ಆಶ್ಚರ್ಯವೇ ಸರಿ......ಬಹುಷಃ ಈ ಕಾಲದಲ್ಲಿ ಕೋಳಿಯೂ ಸಹ ತನ್ನನ್ನು ಕೊಂದು ತಿಂದುವ ಜನರನ್ನು ಕಾಯುವ ಮನಸ್ಥಿತಿಗೆ ಬಂದಿರುವುದು ಪ್ರಕೃತಿಯ ಜೀವರಾಶಿಗಳಲ್ಲಿ ಕಂಡು ಬರುತ್ತಿರುವ ಮುಗ್ಧತೆಗೆ ಹಿಡಿದ ಕೈಗನ್ನಡಿಯಂತಿದೆ. ಮನುಷ್ಯನಲ್ಲಿರುವ ಪ್ರಾಮಾಣಿಕತೆ ಮಾಯವಾಗಿ ಪ್ರಾಣಿಗಳಲ್ಲಿ ಕಂಡು ಬರುತ್ತಿರುವುದು ಎಲ್ಲೊ ಮನುಷ್ಯ ಕುಲಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆಯೇನೋ ಎಂದು ನೋಡುಗರಿಗೆ ಅನಿಸುತ್ತಿದೆ.