Monday, 29 October 2012


ರಜೆ ಮಜಾ ಸವಿಯಲು ಜೋಗಕ್ಕೆ ಲಗ್ಗೆ!

  • October 28, 2012
  • Share  
  • [-]
  • Text
  • [+]

ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದ್ದು, ಜಲಪಾತದ ಸೌಂದರ್ಯ ಕ್ಷೀಣಿಸಲು ಆರಂಭವಾಗಿದೆ.
ಕಾರ್ಗಲ್: ಒಂದೆಡೆ ನೀರಲ್ಲದೇ ಸೊರಗುತ್ತಿರುವ ಜೋಗ ಜಲಪಾತ; ಮತ್ತೊಂದೆಡೆ ರಜೆಯ ಮಜಾ ಸವಿಯಲು ಹರಿದು ಬರುತ್ತಿರುವ ಜನಸಾಗರ....- ಇದು ಕಳೆದ ಕೆಲವು ದಿನಗಳಿಂದ ಜೋಗದಲ್ಲಿ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯಾವಳಿ.

ಶಾಲಾ-ಕಾಲೇಜುಗಳಿಗೆ ದಸರಾ ರಜೆಯ ಜತೆಗೆ ವಿವಿಧ ಹಬ್ಬಗಳ ಆಚರಣೆಗೆ ಮೂರ‌್ನಾಲ್ಕು ರಜಾ ದಿನಗಳು ಸರ್ಕಾರಿ ಕಚೇರಿಗಳಿಗೆ ದೊರೆತಿರುವ ಕಾರಣ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು ಜನಸಾಗರದ ರೂಪದಲ್ಲಿ ಹರಿದು ಬರುತ್ತಿದೆ.

ಮೈಸೂರು ದಸರಾ ಸಡಗರದಲ್ಲಿ ಭಾಗವಹಿಸಿದ ಪ್ರವಾಸಿಗರು ಜತೆಯಲ್ಲಿಯೇ ಜೋಗ ಜಲಪಾತ ಮತ್ತು ಪ್ರಸಿದ್ಧ ಸಿಗಂದೂರು ದೇವಾಲಯದ ವೀಕ್ಷಣೆಗೆ ಬರುತ್ತಿರುವುದು ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲು ಕಾರಣ ಎಂದು ಇಲ್ಲಿನ ಸ್ಥಳೀಯ ಗೈಡ್‌ಗಳ ಅಭಿಪ್ರಾಯ.

ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಸಹಾ ನೂತನವಾಗಿ ಆರಂಭವಾಗಿರುವ ಸಂಗೀತ ಕಾರಂಜಿ ಸಾವಿರಾರು ಜನರನ್ನು ಪ್ರತಿನಿತ್ಯ ಆಕರ್ಷಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ಭಣಗುಡುತ್ತಿದ್ದ ಜೋಗ ಪ್ರದೇಶದಲ್ಲಿ ಈಗ ಚಿತ್ರಣ ಬದಲಾಗಿದೆ. ಕತ್ತಲಾಗುತ್ತಿದ್ದಂತೆ ಎಲ್ಲಿ ನೋಡಿದರೂ ವಾಹನಗಳ ಓಡಾಟ, ಸ್ವಚ್ಛಂದ ವಾಯುವಿಹಾರದಲ್ಲಿ ಓಡಾಡುವ ಪ್ರವಾಸಿಗರ ಹಿಂಡು, ಚುರುಮುರಿ ಮತ್ತು ಕುರುಕುಲು ಪದಾರ್ಥಗಳ ಮಾರಾಟಗಾರರ ಅಬ್ಬರ, ಯಾವುದೋ ಉತ್ಸವದ ಸಡಗರದಂತೆ ಕಂಡು ಬರುತ್ತದೆ.

ಅಭಿವೃದ್ಧಿ ಕಾಮಗಾರಿಗಳ ಸಾಲುಸಾಲು ಪಟ್ಟಿಗಳನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದರೂ ಸಹ ಇಲ್ಲಿ ಪ್ರವಾಸಿಗರಿಗೆ ಅಗತ್ಯವಾದ ವಸತಿ ಮತ್ತು ಮೂಲಸೌಕರ್ಯ ದೊರಕುತ್ತಿಲ್ಲ ಎಂಬುದು ಇಲ್ಲಿಗೆ ಆಗಮಿಸುವ ನಿಸರ್ಗ ಪ್ರಿಯರ ಅಳಲು.

ಹಾಲಿ ಇರುವ ವಸತಿ, ಶೌಚಾಲಯ ಮತ್ತು ಹೋಟೆಲ್ ವ್ಯವಸ್ಥೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಕೆಲವು ನೊಂದ ಪ್ರವಾಸಿಗಳು ಹೇಳುತ್ತಾರೆ.

ಜಲಪಾತ ಪ್ರದೇಶದಲ್ಲಿ ಆಗಮಿಸುವ ಪ್ರವಾಸಿಗರಿಗೆ ದೂರದ ಊರುಗಳಿಗೆ ಸಾಗಲು ಸರ್ಕಾರಿ ಬಸ್ ವೇಳಾಪಟ್ಟಿಯ ಮಾಹಿತಿ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಲ್. ಮಹೇಶ್ ಅಭಿಪ್ರಾಯಪಡುತ್ತಾರೆ.

ಇಲ್ಲಿಗೆ ಸಮೀಪವಿರುವ ಯೂತ್ ಹಾಸ್ಟೆಲ್‌ನಲ್ಲಿ ಕೈಗೆಟುಕುವ ದರದಲ್ಲಿ ವಸತಿ ವ್ಯವಸ್ಥೆ ದೊರಕುತ್ತಿದ್ದರೂ ಸಹ ಈ ಬಗ್ಗೆ ಮಾಹಿತಿ ನೀಡುವ ಯಾವುದೇ ಫಲಕಗಳು ಜಲಪಾತ ಪ್ರದೇಶದಲ್ಲಿ ಕಂಡು ಬರುತ್ತಿಲ್ಲ. ಆತಿಥ್ಯಕ್ಕೆ ಹೆಸರಾದ ಮಲೆನಾಡು ಪ್ರವಾಸಿಗರನ್ನು ಸುಲಿಗೆ ಮಾಡುವ ಕೆಲಸಕ್ಕೆ ಮುಂದಾಗಬಾರದು ಎಂದು ಅವರು ತಿಳಿಸಿದರು.

ಶನಿವಾರ ಬೆಳಿಗ್ಗೆ 3 ಗಂಟೆಯಿಂದಲೇ ನೂರಾರು ವಾಹನಗಳು ಜಲಪಾತ ಪ್ರದೇಶಕ್ಕೆ ಆಗಮಿಸಿದ್ದು, ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಗೇಟ್ ರಾತ್ರಿ 10ಕ್ಕೆ ಮುಚ್ಚುವುದರಿಂದ ಸಾವಿರಾರು ಪ್ರವಾಸಿಗರು ಮತ್ತು ನೂರಾರು ವಾಹಗಳು ಕೊರೆಯುವ ಚಳಿಯಲ್ಲಿ ರಸ್ತೆಯ ಬದಿಗಳಲ್ಲಿ ಕಾದು ನಿಲ್ಲುವಂತಾಗಿತ್ತು ಎಂದು ಸ್ಥಳೀಯ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ. ಹರೀಶ್‌ಗೌಡ ತಿಳಿಸಿದರು.

ಪ್ರಮುಖ ಗೇಟಿನ ಮುಂಭಾಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ನಿಲ್ಲಿಸಿದ್ದ ವಾಹನಗಳ ಪಕ್ಕದಲ್ಲಿಯೇ ಪ್ರವಾಸಿಗರು ಮಲಗಿದ್ದು ಭಾರೀ ದುರಂತಗಳು ಸಂಭವಿಸುವ ಮುಂಚೆಯೇ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜಲಪಾತದ ಮುಂಭಾಗದಲ್ಲಿ ಗ್ರೀನ್ ಹೌಸ್ ಎಂಬ ವಿಶ್ರಾಂತಿ ಪಡೆಯುವ ಸ್ಥಳವಿದ್ದು, ಸದರಿ ಸ್ಥಳದಲ್ಲಿ ರಾತ್ರಿ ಸಮಯದಲ್ಲಿ ಆಗಮಿಸುವ ಪ್ರವಾಸಿಗರಿಗೆ ಉಳಿದು ಕೊಳ್ಳಲು ಪ್ರಾಧಿಕಾರ ಅವಕಾಶ ಕಲ್ಪಿಸಬೇಕು. ಕೂಡಲೇ, ಪ್ರವಾಸಿ ಮಾಹಿತಿ ಕೇಂದ್ರವನ್ನು ಪ್ರಾಧಿಕಾರದ ಮುಖ್ಯಗೇಟಿನ ಸಮೀಪ ತೆರೆಯಬೇಕು ಎಂದು  ಹರೀಶ್‌ಗೌಡ ಜಿಲ್ಲಾಡಳಿತವನ್ನು ಒತ್ತಾಯ ಪಡಿಸಿದ್ದಾರೆ.

ಜೋಗ ಜಲಪಾತ ಪ್ರದೇಶವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯವಾಗಿದ್ದು, ಜತೆಯಲ್ಲಿಯೇ ಸಮಾಜದ ಎಲ್ಲಾ ವರ್ಗದ ಜನತೆಗೆ ಮೂಲ ಸೌಕರ್ಯಗಳು ಇಲ್ಲಿ ಕೈಗೆಟುಕುವ ದರದಲ್ಲಿ ದೊರೆಯುವಂತೆ ಆಗಬೇಕು ಎಂಬುದು ಇಲ್ಲಿನ ಪ್ರಕೃತಿ ಪ್ರಿಯರ ಆಶಯ.