SWAPNA BHOOMI
Wednesday, 9 September 2015
Friday, 15 August 2014
ಲಿಂಗಂ’ ಸಿನಿಮಾಕ್ಕೆ ಲಿಂಗನಮಕ್ಕಿಯಲ್ಲಿ ಶಿವಾಲಯ
ಕಾರ್ಗಲ್: ಚತುರ್ಭಾಷ ತಾರೆ ರಜಿನಿಕಾಂತ್ ಅವರ ‘ಲಿಂಗಂ’ ಚಲನಚಿತ್ರಕ್ಕೆ ಲಿಂಗನಮಕ್ಕಿ ಅಣೆಕಟ್ಟೆಯ ರೇಡಿಯಲ್ ಗೇಟಿನ ಬಲಭಾಗದ ಗುಡ್ಡದ ಮೇಲೆ ಅದ್ದೂರಿ ಶಿವಾಲಯ ಸೆಟ್ಟೇರುತ್ತಿದೆ. ಆ.16ರಿಂದ ಇಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ದೃಢಪಡಿಸಿವೆ.
ಈಗಾಗಲೇ ಜೋಗ ಜಲಪಾತದ ರಾಣಿಫಾಲ್ಸ್ ಮೇಲಿನ ಅರಣ್ಯ ಇಲಾಖಾ ಅತಿಥಿಗೃಹದ ಮುಂಭಾಗದಲ್ಲಿ ಚಿತ್ರೀಕರಣ ಆರಂಭವಾಗಿದೆ. ಬುಧವಾರ ನಟ ರಜನಿಕಾಂತ್ ಅವರ ಆಗಮನದ ದೃಶ್ಯದ ಶೂಟಿಂಗ್ ನಡೆದಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಅಭಿನಯಿಸುತ್ತಿದ್ದಾರೆ.
ಅಪಾರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ರಜನಿಕಾಂತ್ ಅವರನ್ನು ಕಾಣುವ ಆಸೆಯಿಂದ ಅರಣ್ಯ ಇಲಾಖೆಯ ಗೇಟಿನ ಬಳಿ ಕಾದು ನಿಂತಿದ್ದರೂ, ಅಲ್ಲಿರುವ ಭದ್ರತಾ ಸಿಬ್ಬಂದಿ ಮತ್ತು ಚಿತ್ರೀಕರಣ ತಂಡದವರು ಅವರನ್ನು ತಡೆದು ಕೇವಲ ವಿಐಪಿಗಳನ್ನು ಮಾತ್ರ ಒಳಗೆ ಬಿಡುತ್ತಿರುವುದರಿಂದ ಅಭಿಮಾನಿಗಳಲ್ಲಿ ತೀರಾ ನಿರಾಸೆ ಉಂಟಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ.
30ರಿಂದ 40ದಿನಗಳ ಕಾಲ ಶರಾವತಿ ಕಣಿವೆ ಪ್ರದೇಶದಲ್ಲಿ ‘ಲಿಂಗಂ’ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ
Friday, 20 September 2013
ಕಾರ್ಗಲ್: ಐತಿಹಾಸಿಕ ಮತ್ತು ಪಾರಂಪರಿಕವಾಗಿ ಜೋಗ ಜಲಪಾತದ ಎದುರಿನಲ್ಲಿ ನೆಲೆನಿಂತಿರುವ ಮೈಸೂರು ಬಂಗಲೆ ಪ್ರವಾಸಿಗರಿಗೆ ಜಲಪಾತದ ಸವಿಯನ್ನು ಉಣಬಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸುಮಾರು 4ದಶಕಗಳಿಂದ ನಿರ್ವಹಿಸಿಕೊಂಡು ಬಂದಿರುವ ಕೆಪಿಸಿಗೆ ಇದು ಹೆಮ್ಮೆ ಮತ್ತು ಹೆಗ್ಗಳಿಕೆಯಾಗಿತ್ತು.
ಆದರೆ, ಈಚೆಗೆ ಜೋಗ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳಿಂದ, ನಿರ್ವಹಣೆ ಹೊಣೆ ಕೆಪಿಸಿಯ ಕೈತಪ್ಪಲಿದೆಯೇ ಎಂಬ ಪ್ರಶ್ನೆ ಈ ಭಾಗದ ಜನರನ್ನು ಕಾಡುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೋಡಿದವರು ಇಲ್ಲಿನ ಮೈಸೂರು ಬಂಗಲೆಯನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಜಲಪಾತದ ಸಂಪೂರ್ಣ ಸೌಂದರ್ಯವನ್ನು ಸವಿಯಬೇಕಾದರೆ ಮೈಸೂರು ಬಂಗಲೆಯ ಮುಂಭಾಗದಲ್ಲಿ ನಿಂತು ನೋಡಲೇ ಬೇಕು. ಮೈಸೂರು ಬಂಗಲೆಯಂಥ ವೀಕ್ಷಣಾ ಪ್ರದೇಶ ಇರುವ ಏಕೈಕ ಕಾರಣಕ್ಕೆ ಮಾತ್ರ ಜಲಪಾತದ ಅದ್ಭುತ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಸಾಧ್ಯ ಎಂಬುದು ಪ್ರವಾಸಿಗರು ಮತ್ತು ಪ್ರಕೃತಿ ಆಸ್ವಾದಕರ ಅಭಿಪ್ರಾಯ.
1886ರಲ್ಲಿ ಮೈಸೂರು ಅರಸರು ಕಟ್ಟಿಸಿರುವ ಈ ಬಂಗಲೆಯಲ್ಲಿ ಮಹಾರಾಜರ ಆದಿಯಾಗಿ, ಬ್ರಿಟೀಷ್ ವೈಸ್ರಾಯ್ ಗಳು, ಸೇನಾಪತಿಗಳು, ಗಣ್ಯಾತಿಗಣ್ಯರು ಸೇರಿದಂತೆ ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರಿಂದ ಹಿಡಿದು ಮಾಜಿ ರಾಷ್ಟ್ರಪತಿಗಳಾದ ದಿ. ವೆಂಕಟರಾಮನ್ ಅವರೂ ಕೂಡ ಬಂದು ಇಲ್ಲಿನ ಬಂಗಲೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂಬುದು ಈ ಬಂಗಲೆಯ ವಿಶೇಷ. ಇಷ್ಟೊಂದು ಮಹತ್ವಪೂರ್ಣವಾದ ಬಂಗಲೆಯನ್ನು ಸ್ವಾತಂತ್ರ್ಯ ನಂತರ 4ದಶಕಗಳ ಕಾಲ ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡ ಬಂದ ಹೆಗ್ಗಳಿಕೆ ಕೆಪಿಸಿ ಇಲಾಖೆಗೆ ಸೇರಿದೆ. ಆದರೆ ಕೆಪಿಸಿಯ ನಿರ್ವಹಣೆ ಮತ್ತು ಒಡೆತನದಿಂದ ಈ ಬಂಗಲೆ ಕೈ ತಪ್ಪುವ ಲಕ್ಷಣಗಳು ಕಂಡು ಬಂದಿದೆ.
ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಆಳ್ವಿಕೆಯಲ್ಲಿ ಜೋಗ ಜಲಪಾತದ ಕಣಿವೆ ಮುಂಬಯಿ ಪ್ರಾಂತ್ಯ ಮತ್ತು ಮೈಸೂರು ಪ್ರಾಂತ್ಯದ ಗಡಿಭಾಗವಾಗಿದ್ದ ಕಾರಣ ಕಣಿವೆಯ ಎರಡು ದಂಡೆಗಳಲ್ಲಿರುವ ವಿಶ್ರಾಂತಿ ಗೃಹಗಳು 2ಪ್ರಾಂತ್ಯದ ಹೆಸರಿನಲ್ಲಿ ಗುರುತಿಸಲ್ಪಟ್ಟಿತ್ತು. ರಾಜಾ, ರೋರರ್ ಫಾಲ್ಸ್ ಮತ್ತು ಬ್ರಿಟಿಷ್ ಬಂಗಲೆಯನ್ನು ಒಳಗೊಂಡ ಪ್ರದೇಶ ಕಾರವಾರ ಜಿಲ್ಲೆಯ ಗಡಿಗೆ ಸೇರಿದ್ದಾದರೆ, ರಾಕೆಟ್ ರಾಣಿ ಫಾಲ್ಸ್ ಮತ್ತು ಮೈಸೂರು ಬಂಗಲೆಯನ್ನು ಒಳಗೊಂಡ ಪ್ರದೇಶ ಶಿವಮೊಗ್ಗ ಜಿಲ್ಲೆಯ ಗಡಿಗೆ ಸೇರಿದ್ದಾಗಿದೆ. ಮುಂಬೈ ಬಂಗಲೆಯನ್ನು ಬ್ರಿಟಿಷ್ ಆಡಳಿತ ನಿರ್ಮಾಣ ಮಾಡಿದ್ದರೆ, ಮೈಸೂರು ಬಂಗಲೆಯನ್ನು ಮಹಾರಾಜರು ಕಟ್ಟಿಸಿದ್ದು ಎಂಬ ಖ್ಯಾತಿಯಿದೆ.
ಸ್ವಾತಂತ್ರ್ಯ ನಂತರ ಮೈಸೂರು ಬಂಗಲೆ ಲೋಕೋಪಯೋಗಿ ಇಲಾಖೆಯ ನಿರ್ವಹಣೆಗೆ ಒಳಪಟ್ಟಿತ್ತು. ಬದಲಾದ ಕಾಲಘಟ್ಟದಲ್ಲಿ ಮೈಸೂರು ಪವರ್ ಕಾರ್ಪೋರೇಷನ್ ಎಂಬ ಅರೆ ಸರ್ಕಾರಿ ಸಂಸ್ಥೆ ಉದಯವಾದಾಗ ಈ ಬಂಗಲೆ ಕಾರ್ಪೋರೇಶನ್ ಒಡೆತನಕ್ಕೆ ವರ್ಗವಾಗಿತ್ತು. ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಆದಾಗ, ಪವರ್ ಕಾರ್ಪೋರೇಷನ್ ಹೆಸರೂ ಕೂಡ ಕರ್ನಾಟಕ ಪವರ್ ಕಾರ್ಪೋರೇಷನ್ ಎಂದು ಬದಲಾಗಿ ಸದರಿ ಬಂಗಲೆಯನ್ನು ಕೆಪಿಸಿ ಗೆಸ್ಟ್ ಹೌಸ್ ಎಂದು ಕರೆಯಲಾಗುತ್ತಿದೆ.
ಈಚೆಗೆ ನಡೆದ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆ ಮತ್ತು ಪ್ರಾಧಿಕಾರದ ರೂವಾರಿಯಾಗಿರುವ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಮಂಡಿಸಿರುವ ಅಭಿವೃದ್ಧಿ ಪಥದ ಮಾರ್ಗದಲ್ಲಿರುವ ಪ್ರಮುಖ ಅಂಶಗಳಲ್ಲಿ ಜೋಗ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಾಡ್ಜ್ಗಳು, ಅತಿಥಿ ಗೃಹಗಳು, ಹೋಟೆಲ್ ಮತ್ತಿತರರ ಪ್ರಮುಖ ಕಟ್ಟಡಗಳನ್ನು ಪ್ರಾಧಿಕಾರದ ನಿರ್ವಹಣಾ ವ್ಯಾಪ್ತಿಗೆ ಒಳಪಡಿಸಬೇಕು ಎಂಬುದು ಒಂದಾಗಿದೆ.
ಈ ವಿಷಯದ ಮೇಲೆ ಚರ್ಚೆಯಾದಾಗ ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕಾಂಬಳೆ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು. ವಿಷಯದ ಮೇಲೆ ಸಭೆ ಸಹಮತ ಸೂಚಿಸಿ ಸರ್ವಾನುಮತದಿಂದ ಪ್ರಮುಖ ನಿರ್ಣಯಗಳಿಗೆ ಒಪ್ಪಿಗೆ ಪಡೆದಿದೆ. ಈ ನಿಟ್ಟಿನಲ್ಲಿ ಅವಲೋಕನ ನಡೆಸಿದಾಗ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿಯಲ್ಲಿರುವ ಕೆಪಿಸಿ ಗೆಸ್ಟ್ ಹೌಸ್ ಕೆಪಿಸಿ ನಿರ್ವಹಣೆಯಿಂದ ಕೈತಪ್ಪಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
Wednesday, 10 July 2013
ಶಿಕ್ಷೆಗೊಳಗಾದ ದಿನದಿಂದಲೇ ಸಂಸದ, ಶಾಸಕರು ಅನರ್ಹರು: ಸುಪ್ರೀಂ
ನವದೆಹಲಿ (ಪಿಟಿಐ): ತಮ್ಮ ಶಿಕ್ಷೆಯ ವಿರುದ್ಧ ಮೇಲಿನ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೇಲ್ಮನವಿ ಇತ್ಯರ್ಥಕ್ಕಾಗಿ ಬಾಕಿ ಇರುವ ನೆಲೆಯಲ್ಲಿ ಶಿಕ್ಷಿತ ಶಾಸನಕರ್ತರನ್ನು ಅನರ್ಹಗೊಳಿಸದಂತೆ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಒದಗಿಸಲಾಗಿರುವ ವಿಧಿಯು 'ಅಸಿಂಧು' ಎಂದು ಬುಧವಾರ ಘೋಷಿಸಿದ ಸುಪ್ರೀಂಕೋರ್ಟ್ ಈ ವಿಧಿಯನ್ನು ರದ್ದುಪಡಿಸಿತು.
'ಇರುವ ಏಕೈಕ ಪ್ರಶ್ನೆ ಏನೆಂದರೆ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(4)ರ ಸಿಂಧುತ್ವಕ್ಕೆ ಸಂಬಂಧಿಸಿದ್ದು. ನಾವು ಇದನ್ನು ಅಸಿಂಧು ಎಂಬುದಾಗಿ ಘೋಷಿಸುತ್ತಿದ್ದೇವೆ. ಮತ್ತು ಅನರ್ಹತೆಯು ಶಿಕ್ಷೆಗೆ ಒಳಗಾದ ದಿನಾಂಕದಿಂದಲೇ ಅನ್ವಯವಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಹೇಳಿದರು.
ಏನಿದ್ದರೂ ತನ್ನ ನಿರ್ಣಯವು ಈ ತೀರ್ಪಿನ ಪ್ರಕಟಣೆಗೆ ಮುನ್ನ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದ ಸಂಸತ್ ಸದಸ್ಯರು, ಶಾಸಕರು ಅಥವಾ ಇತರ ಶಾಸನಕರ್ತರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.
ಲಿಲಿ ಥಾಮಸ್ ಮತ್ತು ಸರ್ಕಾರೇತರ ಸಂಘಟನೆ ಲೋಕ್ ಪ್ರಹರಿ ಕಾರ್ಯದರ್ಶಿ ಎಸ್.ಎನ್ ಶುಕ್ಲ ಅವರು ಜನತಾ ಪ್ರಾನಿನಿಧ್ಯ ಕಾಯ್ದೆಯ ವಿವಿಧ ವಿಧಿಗಳನ್ನು ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು.
ಕಾಯ್ದೆಯ ಉಲ್ಲೇಖಿತ ವಿಧಿಗಳು ಅಪರಾಧಿಗಳಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಇಲ್ಲವೇ ಸಂಸತ್ ಸದಸ್ಯರು ಅಥವಾ ಶಾಸಕರಾಗಲು ಬಹಿರಂಗವಾಗಿ ತಡೆ ಹಾಕುವ ಕೆಲವೊಂದು ಸಂವಿಧಾನಾತ್ಮಕ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂಬ ನೆಲೆಯಲ್ಲಿ ಅರ್ಜಿದಾರರು ಈ ವಿಧಿಗಳನ್ನು ರದ್ದು ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು
Subscribe to:
Posts (Atom)