Monday, 29 October 2012


ರಜೆ ಮಜಾ ಸವಿಯಲು ಜೋಗಕ್ಕೆ ಲಗ್ಗೆ!

  • October 28, 2012
  • Share  
  • [-]
  • Text
  • [+]

ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದ್ದು, ಜಲಪಾತದ ಸೌಂದರ್ಯ ಕ್ಷೀಣಿಸಲು ಆರಂಭವಾಗಿದೆ.
ಕಾರ್ಗಲ್: ಒಂದೆಡೆ ನೀರಲ್ಲದೇ ಸೊರಗುತ್ತಿರುವ ಜೋಗ ಜಲಪಾತ; ಮತ್ತೊಂದೆಡೆ ರಜೆಯ ಮಜಾ ಸವಿಯಲು ಹರಿದು ಬರುತ್ತಿರುವ ಜನಸಾಗರ....- ಇದು ಕಳೆದ ಕೆಲವು ದಿನಗಳಿಂದ ಜೋಗದಲ್ಲಿ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯಾವಳಿ.

ಶಾಲಾ-ಕಾಲೇಜುಗಳಿಗೆ ದಸರಾ ರಜೆಯ ಜತೆಗೆ ವಿವಿಧ ಹಬ್ಬಗಳ ಆಚರಣೆಗೆ ಮೂರ‌್ನಾಲ್ಕು ರಜಾ ದಿನಗಳು ಸರ್ಕಾರಿ ಕಚೇರಿಗಳಿಗೆ ದೊರೆತಿರುವ ಕಾರಣ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು ಜನಸಾಗರದ ರೂಪದಲ್ಲಿ ಹರಿದು ಬರುತ್ತಿದೆ.

ಮೈಸೂರು ದಸರಾ ಸಡಗರದಲ್ಲಿ ಭಾಗವಹಿಸಿದ ಪ್ರವಾಸಿಗರು ಜತೆಯಲ್ಲಿಯೇ ಜೋಗ ಜಲಪಾತ ಮತ್ತು ಪ್ರಸಿದ್ಧ ಸಿಗಂದೂರು ದೇವಾಲಯದ ವೀಕ್ಷಣೆಗೆ ಬರುತ್ತಿರುವುದು ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲು ಕಾರಣ ಎಂದು ಇಲ್ಲಿನ ಸ್ಥಳೀಯ ಗೈಡ್‌ಗಳ ಅಭಿಪ್ರಾಯ.

ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಸಹಾ ನೂತನವಾಗಿ ಆರಂಭವಾಗಿರುವ ಸಂಗೀತ ಕಾರಂಜಿ ಸಾವಿರಾರು ಜನರನ್ನು ಪ್ರತಿನಿತ್ಯ ಆಕರ್ಷಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ಭಣಗುಡುತ್ತಿದ್ದ ಜೋಗ ಪ್ರದೇಶದಲ್ಲಿ ಈಗ ಚಿತ್ರಣ ಬದಲಾಗಿದೆ. ಕತ್ತಲಾಗುತ್ತಿದ್ದಂತೆ ಎಲ್ಲಿ ನೋಡಿದರೂ ವಾಹನಗಳ ಓಡಾಟ, ಸ್ವಚ್ಛಂದ ವಾಯುವಿಹಾರದಲ್ಲಿ ಓಡಾಡುವ ಪ್ರವಾಸಿಗರ ಹಿಂಡು, ಚುರುಮುರಿ ಮತ್ತು ಕುರುಕುಲು ಪದಾರ್ಥಗಳ ಮಾರಾಟಗಾರರ ಅಬ್ಬರ, ಯಾವುದೋ ಉತ್ಸವದ ಸಡಗರದಂತೆ ಕಂಡು ಬರುತ್ತದೆ.

ಅಭಿವೃದ್ಧಿ ಕಾಮಗಾರಿಗಳ ಸಾಲುಸಾಲು ಪಟ್ಟಿಗಳನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದರೂ ಸಹ ಇಲ್ಲಿ ಪ್ರವಾಸಿಗರಿಗೆ ಅಗತ್ಯವಾದ ವಸತಿ ಮತ್ತು ಮೂಲಸೌಕರ್ಯ ದೊರಕುತ್ತಿಲ್ಲ ಎಂಬುದು ಇಲ್ಲಿಗೆ ಆಗಮಿಸುವ ನಿಸರ್ಗ ಪ್ರಿಯರ ಅಳಲು.

ಹಾಲಿ ಇರುವ ವಸತಿ, ಶೌಚಾಲಯ ಮತ್ತು ಹೋಟೆಲ್ ವ್ಯವಸ್ಥೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಕೆಲವು ನೊಂದ ಪ್ರವಾಸಿಗಳು ಹೇಳುತ್ತಾರೆ.

ಜಲಪಾತ ಪ್ರದೇಶದಲ್ಲಿ ಆಗಮಿಸುವ ಪ್ರವಾಸಿಗರಿಗೆ ದೂರದ ಊರುಗಳಿಗೆ ಸಾಗಲು ಸರ್ಕಾರಿ ಬಸ್ ವೇಳಾಪಟ್ಟಿಯ ಮಾಹಿತಿ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಲ್. ಮಹೇಶ್ ಅಭಿಪ್ರಾಯಪಡುತ್ತಾರೆ.

ಇಲ್ಲಿಗೆ ಸಮೀಪವಿರುವ ಯೂತ್ ಹಾಸ್ಟೆಲ್‌ನಲ್ಲಿ ಕೈಗೆಟುಕುವ ದರದಲ್ಲಿ ವಸತಿ ವ್ಯವಸ್ಥೆ ದೊರಕುತ್ತಿದ್ದರೂ ಸಹ ಈ ಬಗ್ಗೆ ಮಾಹಿತಿ ನೀಡುವ ಯಾವುದೇ ಫಲಕಗಳು ಜಲಪಾತ ಪ್ರದೇಶದಲ್ಲಿ ಕಂಡು ಬರುತ್ತಿಲ್ಲ. ಆತಿಥ್ಯಕ್ಕೆ ಹೆಸರಾದ ಮಲೆನಾಡು ಪ್ರವಾಸಿಗರನ್ನು ಸುಲಿಗೆ ಮಾಡುವ ಕೆಲಸಕ್ಕೆ ಮುಂದಾಗಬಾರದು ಎಂದು ಅವರು ತಿಳಿಸಿದರು.

ಶನಿವಾರ ಬೆಳಿಗ್ಗೆ 3 ಗಂಟೆಯಿಂದಲೇ ನೂರಾರು ವಾಹನಗಳು ಜಲಪಾತ ಪ್ರದೇಶಕ್ಕೆ ಆಗಮಿಸಿದ್ದು, ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಗೇಟ್ ರಾತ್ರಿ 10ಕ್ಕೆ ಮುಚ್ಚುವುದರಿಂದ ಸಾವಿರಾರು ಪ್ರವಾಸಿಗರು ಮತ್ತು ನೂರಾರು ವಾಹಗಳು ಕೊರೆಯುವ ಚಳಿಯಲ್ಲಿ ರಸ್ತೆಯ ಬದಿಗಳಲ್ಲಿ ಕಾದು ನಿಲ್ಲುವಂತಾಗಿತ್ತು ಎಂದು ಸ್ಥಳೀಯ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ. ಹರೀಶ್‌ಗೌಡ ತಿಳಿಸಿದರು.

ಪ್ರಮುಖ ಗೇಟಿನ ಮುಂಭಾಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ನಿಲ್ಲಿಸಿದ್ದ ವಾಹನಗಳ ಪಕ್ಕದಲ್ಲಿಯೇ ಪ್ರವಾಸಿಗರು ಮಲಗಿದ್ದು ಭಾರೀ ದುರಂತಗಳು ಸಂಭವಿಸುವ ಮುಂಚೆಯೇ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜಲಪಾತದ ಮುಂಭಾಗದಲ್ಲಿ ಗ್ರೀನ್ ಹೌಸ್ ಎಂಬ ವಿಶ್ರಾಂತಿ ಪಡೆಯುವ ಸ್ಥಳವಿದ್ದು, ಸದರಿ ಸ್ಥಳದಲ್ಲಿ ರಾತ್ರಿ ಸಮಯದಲ್ಲಿ ಆಗಮಿಸುವ ಪ್ರವಾಸಿಗರಿಗೆ ಉಳಿದು ಕೊಳ್ಳಲು ಪ್ರಾಧಿಕಾರ ಅವಕಾಶ ಕಲ್ಪಿಸಬೇಕು. ಕೂಡಲೇ, ಪ್ರವಾಸಿ ಮಾಹಿತಿ ಕೇಂದ್ರವನ್ನು ಪ್ರಾಧಿಕಾರದ ಮುಖ್ಯಗೇಟಿನ ಸಮೀಪ ತೆರೆಯಬೇಕು ಎಂದು  ಹರೀಶ್‌ಗೌಡ ಜಿಲ್ಲಾಡಳಿತವನ್ನು ಒತ್ತಾಯ ಪಡಿಸಿದ್ದಾರೆ.

ಜೋಗ ಜಲಪಾತ ಪ್ರದೇಶವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯವಾಗಿದ್ದು, ಜತೆಯಲ್ಲಿಯೇ ಸಮಾಜದ ಎಲ್ಲಾ ವರ್ಗದ ಜನತೆಗೆ ಮೂಲ ಸೌಕರ್ಯಗಳು ಇಲ್ಲಿ ಕೈಗೆಟುಕುವ ದರದಲ್ಲಿ ದೊರೆಯುವಂತೆ ಆಗಬೇಕು ಎಂಬುದು ಇಲ್ಲಿನ ಪ್ರಕೃತಿ ಪ್ರಿಯರ ಆಶಯ.

 

Sunday, 23 September 2012

ಮನೆಯನ್ನು ಕಾವಲು ಕಾಯುವ ಕೋಳಿ ಹುಂಜ  
       ಈ ವಿಚಾರ ನಂಬಿದರೆ ನಂಬಿ ಬಿಟ್ಟರೆ ಬಿಡಿ, ವಿಚಿತ್ರ ಅನಿಸಿದರು ಇದು ಸತ್ಯ ಪ್ರಾಮಾಣಿಸಿ ನೋಡಬೇಕಾದರೆ ಒಮ್ಮೆ ಬೇಟಿ ಕೊಟ್ಟು ನೋಡಿ ಕಾರ್ಗಲ್ಲಿನ ಹಿರಿಯ ಸಮಾಜವಾದಿ ಹಾ ಸಾ ಹಸನ್ ರವರ ಮನೆಗೆ.
     ಸಾಗರ ತಾಲ್ಲೂಕಿನ ಸಮಾಜವಾದಿ ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲೆಯ ಮರೆಯ ಕಾಯಿಯಂತೆ ಗುರುತಿಸಿ ಕೊಂಡ ಹಾ ಸಾ ಹಸನ್ ಕಾರ್ಗಲ್ ಈಗ ಮಸೀದಿ ರಸ್ತೆಯ ತಮ್ಮ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಇವರ ಮಕ್ಕಳೆಲ್ಲ ಉದ್ಯೋಗ, ವ್ಯವಹಾರಗಳೊಂದಿಗೆ ರಾಜಧಾನಿ,ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ.
     ವಿಶ್ರಾಂತ ಜೀವನ ನಡೆಸುತ್ತಿರುವ ಹಸ್ಸನ್ ಸಾಹೇಬರಿಗೆ ಪರಿಸರ, ಪ್ರಕೃತಿ, ಪುಸ್ತಕಗಳ ಜೊತೆಗೆ ಭಾವನಾತ್ಮಕವಾಗಿ ಜೀವನ ನಡೆಸುವ ಸಾಹೇಬರು..ಧರ್ಮ ಪತ್ನಿ ಜೈಬುನ್ನಿಸ ರೊಂದಿಗೆ ನೆಮ್ಮದಿಯ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ದಂಪತಿಗಳ ಮಕ್ಕಳಾದ   ಮನ್ಸೂರ್, ಹಯಾತ್, ಸಾದಿಕ್, ರೇಶ್ಮ ಬಷೀರ್, ಕುಟುಂಬ ವರ್ಗದೊಂದಿಗೆ ಆಗಾಗ ಬಂದು ತಂದೆ ತಾಯಿಯ ಕ್ಷೇಮ ಸಮಾಚಾರ ವಿಚಾರಿಸಿ ಕೊಂಡು ಹೋಗುತ್ತಿದ್ದರು. ಬೆಂಗಳೂರಿನ ಮೊಮ್ಮಕ್ಕಳಾದ ಮಿಶಾಲ್, ಮನಾಲ್ ಮತ್ತು ಫಾತಿಮಾ  ಬರುವಾಗ ಪುಟ್ಟ ಕೋಳಿ ಮರಿಯನ್ನುತಮ್ಮ   ಬಳಿ ಇಟ್ಟುಕೊಂಡು  ವಾಪಾಸು ಹೋಗುವಾಗ ತಮ್ಮ  ಸಂಗಡ ತೆಗೆದು ಕೊಂಡು ಹೋಗಿ ಬಿಡುತ್ತಿದ್ದರು.

     ಆದರೆ ಅದೊಂದು ದಿನ ಕಾರಿನಲ್ಲಿ ಕುಟುಂಬ ಹೊರಟಾಗ ಪರಿಸರ ಪ್ರೇಮಿಯಾದ ಹಸನ್್ ಸಾಹೇಬರು ಹುಂಜ ಮರಿಯನ್ನು ಇಲ್ಲೆ ಬಿಟ್ಟು ಹೋಗ್ರೋ, ಅದಕ್ಕೆ ಬೇಕಾದ ಕಾಳು ಕಡ್ಡಿ , ಗೆದ್ದಲು ಹುಳುಗಳು ಹೇರಳವಾಗಿ ಮಲೆನಾಡ ಸ್ವರ್ಗ ಸೀಮೆಯಾದ ಕಾರ್ಗಲ್ ನಲ್ಲಿ ದೊರೆಯುವುದರಿಂದ,  ಮನೆಯಲ್ಲೇ ಬಿಟ್ಟು ಹೋಗಿಬಿಡು ಎಂದು ಸಲಹೆ ನೀಡಿದರು. ಅಜ್ಜನ ಸಲಹೆಯಂತೆ ಮೊಮ್ಮಗ ಮಿಶಾಲ್ ಒಲ್ಲದ ಮನಸ್ಸಿನಿಂದ ಬಿಟ್ಟು ಹೋದ.ಆದರೆ ಹೋದ ನಂತರ ಪ್ರತಿ ದಿವಸ ಬೆಂಗಳೂರಿನಿಂದ ಅಜ್ಜನಿಗೆ ದೂರವಾಣಿ ಮೂಲಕ ಕೋಳಿಯ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದ. ಹೀಗೆ ದಿನ ಕಳೆದು 
 ನಂತರದ ದಿನಗಳಲ್ಲಿ ಮರಿ ಹುಂಜ ಬೆಳೆದು ದೊಡ್ದವನಾದ. ಈಗ ಈ ಹುಂಜ ಬೆಳಿಗ್ಗೆ ಆಗುತ್ತಿದ್ದಂತೆ ಪ್ರಧಾನ ಬಾಗಿಲ ಬಳಿ ಬಂದು ನಿಂತು ಬಿಡುತ್ತಾನೆ.
      ನಂತರದ ಕತೆಯೇ ಬೇರೆ. ಮನೆಗೆ ಅಪರಿಚಿತರು ಯಾರು ಬರುವಂತೆ ಇಲ್ಲ. ಈತನಿಗೆ ಸ್ವಲ್ಪ ಅನುಮಾನ ಬಂದರೂ ಸಾಕು ಹಾರಿ ಕುಕ್ಕಿ ಬಿಡುತ್ತಾನೆ.ಈತ ಕುಕ್ಕುವ ವಿಚಾರ ತಿಳಿದು ಈಗ  ಮನೆ ಕೆಲಸದವರು, ಹಾಲು ಕೊಡುವವರು, ಪೇಪರ್ ಹಾಕುವವರು, ಕರೆಂಟ್ ಬಿಲ್ ಕೊಡುವವರು, ಎಲ್ಲರೂ ಹೆದರುತ್ತಾರೆ. ಆದರೆ ತನ್ನನ್ನು ಸಾಕಿದ ಹಸನ್ ಸಾಹೇಬ್ ದಂಪತಿಗಳಿಗೆ ಮಾತ್ರ ತಲೆ ಬಾಗಿ ವಿನೀತನಾಗಿ ತನ್ನ ಮೈಯನ್ನು ಅವರ ಕಾಲಿಗೆ ಸವರುತ್ತಾ ತನ್ನ ಸ್ವಾಮಿ ನಿಷ್ಟೆಯನ್ನು ಪ್ರದರ್ಶಿಸುತ್ತಾನೆ. 

ಬಹುಶಃ ಈತನಿಗೆ ಅದ್ಯಾವುದೋ ದೈವಿಕ ಶಕ್ತಿಯ ಒಲುಮೆ ಇರಬಹುದೇನೋ ಎಂದನಿಸುತ್ತದೆ. ಏಕೆಂದರೆ ಈತ ಬೆಂಗಳೂರಿನಲ್ಲಿರುವಾಗ ಸಾಕಷ್ಟು ಬಾರಿ ಎರಡನೇ ಅಂತಸ್ತಿನ ಕಟ್ಟಡದ ಮೇಲಿನಿಂದ ಕೆಳಗೆ ಆಕಸ್ಮಿಕವಾಗಿ ವಾಹನಗಳ ಸಂಚಾರ ಜಾಸ್ತಿಯಿರುವ ರಸ್ತೆಯಲ್ಲಿ ಬಿದ್ದು ಪಾರಾಗಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ ಬೆಕ್ಕು ಮತ್ತು ನಾಯಿ ಬಾಯಿಗೆ ತುತ್ತಾಗುವ ಸಾಕಷ್ಟು ಸಂದರ್ಭಗಳು ಇವನಿಗೆ ಎದುರಾಗಿವೆ. ಒಮ್ಮೆ ಈತನನ್ನು ಸಮೀಪದ ಇಡುವಾಣಿ ಗ್ರಾಮದ ಮೀಸೆ ಮಾಮನೊಬ್ಬ ಹಿಡಿದು ಕದ್ದು ಮಾರಿಬಿಟ್ಟ. ಆಶ್ಚರ್ಯಕರ ರೀತಿಯಲ್ಲಿ ಈತ ಸಂಜೆಯಾಗುವುದರೊಳಗಾಗಿ ವಾಪಾಸು ಬಂದು ಮನೆ ಸೇರಿಕೊಂಡಿದ್ದ. ಒಟ್ಟಾರೆ ಸಾವನ್ನು ಸಾಕಷ್ಟು ಬಾರಿ ಸಮೀಪದಿಂದ ಕಂಡು ವಾಪಸ್ಸಾದ ಮೃತ್ಯುಂಜಯನಂತೆ ಇಂದು ಓಡಾಡಿಕೊಂಡಿದ್ದಾನೆ. 
      ನಾವುಗಳು ನಾಯಿ ಮನೆ ಕಾಯುವುದನ್ನು ಕೇಳಿದ್ದೇವೆ..ಆದರೆ ಕೋಳಿ ಕಾಯುವುದು ಆಶ್ಚರ್ಯವೇ ಸರಿ......ಬಹುಷಃ ಈ ಕಾಲದಲ್ಲಿ ಕೋಳಿಯೂ ಸಹ ತನ್ನನ್ನು ಕೊಂದು ತಿಂದುವ ಜನರನ್ನು ಕಾಯುವ ಮನಸ್ಥಿತಿಗೆ ಬಂದಿರುವುದು ಪ್ರಕೃತಿಯ ಜೀವರಾಶಿಗಳಲ್ಲಿ ಕಂಡು ಬರುತ್ತಿರುವ ಮುಗ್ಧತೆಗೆ ಹಿಡಿದ ಕೈಗನ್ನಡಿಯಂತಿದೆ. ಮನುಷ್ಯನಲ್ಲಿರುವ ಪ್ರಾಮಾಣಿಕತೆ ಮಾಯವಾಗಿ ಪ್ರಾಣಿಗಳಲ್ಲಿ ಕಂಡು ಬರುತ್ತಿರುವುದು ಎಲ್ಲೊ  ಮನುಷ್ಯ ಕುಲಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆಯೇನೋ ಎಂದು ನೋಡುಗರಿಗೆ ಅನಿಸುತ್ತಿದೆ.

Tuesday, 21 August 2012


ಜೋಗ ಜಲಪಾತಕ್ಕೆ ಪ್ರವಾಸಿಗರ ದಂಡು

  • August 20, 2012
  • Share  
  • [-]
  • Text
  • [+]

ಜೋಗ ಜಲಪಾತದಲ್ಲಿ ಭಾನುವಾರ ಪ್ರವಾಸಿಗರ ದಂಡು ಕಂಡು ಬಂದಿದ್ದು ಹೀಗೆ.
ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ರಾಜ್ಯದ ಎಲ್ಲೆಡೆಯಿಂದ ಪ್ರವಾಸಿಗರ ದಂಡು ಭಾನುವಾರ ಹರಿದು ಬಂದ ದೃಶ್ಯ ಕಂಡು ಬರುತ್ತಿತ್ತು.

ಅಬ್ಬರಿಸಿದ ಆಶ್ಲೇಷ ಮಳೆ ಮುಗಿದು ಆರಂಭವಾಗಿರುವ ಮಖ ಮಳೆ ತಣ್ಣನೆಯ ರೀತಿಯಲ್ಲಿ ಕಣಿವೆ ಪ್ರದೇಶದಲ್ಲಿ ಸುರಿಯುತ್ತಿದ್ದು, ಜಲಪಾತ ತನ್ನ ಸೌಂದರ್ಯವನ್ನು ಸಹಜ ಸ್ಥಿತಿಯಲ್ಲಿ ಕಾಯ್ದುಕೊಂಡು ಧುಮ್ಮಿಕ್ಕುತ್ತಿದೆ.

ಸಾವಿರಾರು ಸಂಖ್ಯೆಯ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಗಟ್ಟಿ ನಿಂತು ಇಲ್ಲಿನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಆಗಿತ್ತು. ಸಾವಿರರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ  ಜೋಗದ ಗುಂಡಿಗೆ ಇಳಿದಿದ್ದರು. ಜಲಪಾತದ ಎದುರು ಭಾಗದ ಪ್ರದೇಶದಲ್ಲಿ ಭಾರೀ ಜನದಟ್ಟಣೆ ಕಂಡು ಬಂದಿತ್ತು.

ಪ್ರಾಧಿಕಾರದ ಒಳಭಾಗದಲ್ಲಿ ಇರುವ ಪಾರ್ಕಿಂಗ್ ವ್ಯವಸ್ಥೆ ತುಂಬಿ ವಾಹನಗಳು ಪ್ರಧಾನ ಗೇಟಿನ ಒಳಗೆ ಬರಲು ಸಾಧ್ಯವಾಗದೇ ಸೀತಾಕಟ್ಟೆ ಸೇತುವೆಯವರೆಗೂ ರಸ್ತೆಯ ಬದಿಗಳಲ್ಲಿ ಎಲ್ಲೆಂದರಲ್ಲಿ ನಿಲುಗಡೆ ಮಾಡಿದ್ದವು. ವಾಹನಗಳಲ್ಲಿ ಬಂದ ಪ್ರವಾಸಿಗರು ಮಾರ್ಗಮಧ್ಯೆ ಕೆಳಗಿಳಿದು ಜಲಪಾತದೆಡೆಗೆ ನಡೆದು ಕೊಂಡು ಬರುವ ದೃಶ್ಯ ಕಂಡು ಬರುತ್ತಿತ್ತು.

ಜಲಪಾತದ ಮುಂದಿರುವ ಪ್ರಾಧಿಕಾರದ ವೃತ್ತದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ, ಪ್ರವಾಸಿ ವಾಹನಗಳಿಂದ ತಡೆಯುಂಟಾಗಿ ಪೊಲೀಸರು ಸಂಚಾರ ವ್ಯವಸ್ಥೆ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದರು.

ಮೋಡ ಮುಸುಕಿದ ವಾತಾವರಣದಲ್ಲಿ ಮಳೆ ಮಂಜಿನ ನಡುವೆ ಜಲಪಾತದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಸವಿದು ಸಂತಸ ಪಟ್ಟುಕೊಳ್ಳುತ್ತ ದೃಶ್ಯ ಕಂಡುಬಂತು.

Wednesday, 15 August 2012

       66ನೇ  ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ...ಲಿಂಗನಮಕ್ಕಿ ಅಣೆಕಟ್ಟೆಯ ಮೇಲೆ..ಹಾಗೇ ಹಿನ್ನೀರಿನ ಒಂದೆರಡು ಫೋಟೋ ಹೊಡೆದುಕೊಂಡು ಬರುವ ಎಂದು ಚೀಫ್ ಇಂಜಿನಿಯರ್ ರಾಜಮುಡಿ ಸಾಹೇಬರಲ್ಲಿ ಕೇಳಿಕೊಂಡು ಜೊತೆಗಿದ್ದ ಸ್ನೇಹಿತ ಮುರುಗನ ಜೊತೆ ಲಿಂಗನಮಕ್ಕಿ ಅಣೆಕಟ್ಟೆಯ ದರುಶನಕ್ಕೆ ಹೊರಟೆವು.......ನಮ್ಮ ಅದೃಷ್ಟಕ್ಕೆ ಎಂಬಂತೆ ಎಂದು ಕಂಡು ಬರದ ಕಾಮನಬಿಲ್ಲು ಅಣೆಕಟ್ಟೆಯ ಮೇಲ್ಭಾಗದಲ್ಲಿ ಬಾನೆತ್ತರದಲ್ಲಿ ಮೂಡಿಬಂದಿತ್ತು ....ಕೂಡಲೇ ಕೈಲಿದ್ದ ಕ್ಯಾಮೆರಾ ದಲ್ಲಿ ಸಾಧ್ಯ ವಾದಷ್ಟು ಫೋಟೋ ತೆಗೆದು ನೋಡಿದೆ...ಆ ಫೋಟೋ ಒಂದು ರೀತಿಯ ವಿಶೇಷ ಆಗಿ ಕಂಡು ಬಂತು.. ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳನ್ನ ಸೆರೆ ಹಿಡಿದ ಸಂತಸ ಮನೆ ಮಾಡಿತು..ನಿಮಿಷಾರ್ಧದಲ್ಲಿ..ಕಾಮನ ಬಿಲ್ಲು ಮಾಯಾವಾಯಿತು.

Monday, 13 August 2012

Sunday, 12 August 2012

FREEDOM...FIGHTERS


ಸ್ವಾತಂತ್ರ್ಯ ಸಂಗ್ರಾಮದ ಮಹಿಳಾ ಹೆಜ್ಜೆ

  • August 12, 2012
  • Share  
  • [-]
  • Text
  • [+]


ಕಾರ್ಗಲ್ ಸಮೀಪದ ಜೋಗ ಜಲಪಾತ ಬಳಿಯ ಮಾವಿನಗುಂಡಿಯಲ್ಲಿ ನಿರ್ಮಾಣವಾಗಿರುವ ಮಹಿಳಾ ಸತ್ಯಾಗ್ರಹ ಸ್ಮಾರಕದ ಒಂದು ನೋಟ.
ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತೀಯರ ವಿಮೋಚನೆಗಾಗಿ ಹೋರಾಡಿದ ಅನೇಕ ವೀರರನ್ನು ಕೊಡುಗೆ ನೀಡಿದ ಹೆಮ್ಮೆಯ ಬೀಡು ನಮ್ಮ ಕರುನಾಡು. ಈ ನಾಡಿನಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಕೊಡುಗೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ನೀಡಿರುವುದು ಕರ್ನಾಟಕದ ಮಟ್ಟಿಗೆ ಗಮನಿಸಬೇಕಾದ ಅಂಶ. ಈ ದಿಸೆಯಲ್ಲಿ ನಡೆದು ಬಂದ ಹೋರಾಟದ ಹಾದಿಗಳಲ್ಲಿ ಕಾರ್ಗಲ್ ಸಮೀಪದ ಮಾವಿನ ಗುಂಡಿಯ ಮಹಿಳಾ ಸತ್ಯಾಗ್ರಹ ವಿಶಿಷ್ಟವಾದದ್ದು.

ವಿಶ್ವ ಪ್ರಸಿದ್ಧ ಜೋಗ ಜಲಪಾತದಿಂದ ಕೇವಲ 1 ಕಿ.ಮೀ. ದೂರವಿರುವ ಮಾವಿನಗುಂಡಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿ ಕೊಂಡಿರುವ ಗಡಿಭಾಗವಾಗಿದೆ. ಇಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಾ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ತಿಳಿಸುವ ಪ್ರಾಚೀನ ಮಾದರಿಯ ಭವನವೇ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಸಂಪುಟದಲ್ಲಿ ಉತ್ತರ ಕನ್ನಡ ಜಿಲ್ಲೆಯ `ಕರ ನಿರಾಕರಣೆ` ಸತ್ಯಾಗ್ರಹ ರೋಮಾಂಚನಕಾರಿ ಪುಟವಾಗಿದ್ದು, ಅದರಲ್ಲಿ ಮಾವಿನಗುಂಡಿಯ ಮಹಿಳೆಯರ ಉಪವಾಸ ಸತ್ಯಾಗ್ರಹ ಅವರ ದೇಶ ಭಕ್ತಿ, ಛಲ, ಸಂಕಲ್ಪ, ಸಹನೆ, ತ್ಯಾಗ ಹಾಗೂ ಧೈರ್ಯಗಳಿಗೆ ನಿದರ್ಶನವಾಗಿದೆ.

1932ರ ಮೇ 18ರಂದು ಕರ ನೀಡದ ರೈತರ ಎಮ್ಮೆಗಳನ್ನು ಬ್ರಿಟಿಷರ ಪರವಾಗಿ ರಸ್ತೆ ಕೆಲಸದ ಕಾರಕೂನ ಹಾಗೂ ಒಬ್ಬ ಹವಾಲ್ದಾರ ಬಲಾತ್ಕಾರವಾಗಿ ಪಡೆದುಕೊಂಡು ದಬ್ಬಾಳಿಕೆ ನಡೆಸಿದಾಗ, ಅವುಗಳನ್ನು ಮರಳಿ ಪಡೆಯಲು ಇಲ್ಲಿನ ಗ್ರಾಮೀಣ ಮಹಿಳೆಯರು ಕೆಚ್ಚೆದೆಯಿಂದ ಸೆಟೆದು ನಿಂತು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಈ ಸತ್ಯಾಗ್ರಹದಲ್ಲಿ ಬಾಣಂತಿಯರು, ಹೆಣ್ಣುಮಕ್ಕಳು, ವಯಸ್ಕರು ಜತೆಗೂಡಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದರು. ಇವರಲ್ಲಿ ಪ್ರಮುಖವಾಗಿ ತ್ಯಾಗಲಿ ಭುವನೇಶ್ವರಮ್ಮ 32 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತರೇ, ಕಲ್ಲಾಳ ಲಕ್ಷ್ಮಮ್ಮ 22 ದಿನ ಕಾಲ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟಕ್ಕೆ ಸ್ಫೂರ್ತಿಯಾದರು.

ಅವರೊಂದಿಗೆ ದೊಡ್ಮನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಪಣಜಿ ಬೈಲು ದುಗ್ಗಮ್ಮ, ಕುಳಿಬೀಡು ಭಾಗೀರತಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಹದೇವಮ್ಮ, ಹೆಗ್ಗಾರ ದೇವಮ್ಮ ಪ್ರಮುಖರು. 

ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹದಿಂದ ಪ್ರೇರಿತರಾದ ಈ ಗ್ರಾಮೀಣ ಮಹಿಳೆಯರು ತಮ್ಮದೇ ಆದ ಶೈಲಿಯಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಮೊಳಗಿಸಿದ `ಕರ ನಿರಾಕರಣೆ` ಸತ್ಯಾಗ್ರಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು ಗಮನಾರ್ಹ ವಿಚಾರ.

ಇಂತಹ ಮಹತ್ವಪೂರ್ಣ ಹೋರಾಟ ಜನಮಾನಸದ ನೆನಪಿನ ಅಂಗಳದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಿರ್ಮಿಸಿರುವ ಯೋಜನೆಯೇ ಮಹಿಳಾ ಸತ್ಯಾಗ್ರಹ ಸ್ಮಾರಕ ಭವನ.

ಇಲ್ಲಿನ ಸ್ಮಾರಕ ಭವನದಲ್ಲಿ ಮಹಿಳೆಯರು ಸತ್ಯಾಗ್ರಹ ಕುಳಿತ ಮಾದರಿಯ ಆಕೃತಿಗಳನ್ನು ನಿಪುಣ ಕಲಾಕಾರರ ಸಹಾಯದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ. ಮಹಿಳೆಯರನ್ನು ಕೋಳ ತೊಡಿಸಿ ಬ್ರಿಟೀಷ್ ಸೈನಿಕರು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು, ಪ್ರಮುಖ ಮಹಿಳಾ ಹೋರಾಟಗಾರರನ್ನು ಬಂದೀಖಾನೆಯಲ್ಲಿ ಬಂಧಿಸಿಟ್ಟಿರುವ ರೀತಿಯ ಕಲಾಕೃತಿಗಳು, ಜೀವಂತ ಆಕೃತಿಗಳ ರೀತಿಯಲ್ಲಿ ನೋಡುಗರಿಗೆ ಭಾಸವಾಗುತ್ತದೆ.

ಇವಕ್ಕೆ ಲಗತ್ತಾಗಿ ಬೆಟ್ಟದ ಮೇಲಿನಿಂದ ಹರಿದು ಬರುವ ಸುಂದರ ಝರಿಗಳು, ಕೃತಕ ಬೆಟ್ಟ ಗುಡ್ಡಗಳು, ಆಕರ್ಷಕವಾದ ಹೂದೋಟ, ಕೋಟೆ ಮಾದರಿಯ ಕಾಂಪೌಂಡ್ ನಿಸರ್ಗದ ಮಡಿಲಿನಲ್ಲಿ ಲೀನವಾಗುವ ರೀತಿಯಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ.

66ನೇ ಸ್ವಾತಂತ್ರ್ಯ ಉತ್ಸವ ಸಂದರ್ಭದಲ್ಲಿ ಜೋಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ಬಗ್ಗೆ ಉಪಯುಕ್ತ ಮಾಹಿತಿ ದೊರಕುವ ಕೆಲಸವನ್ನು ಸರ್ಕಾರ ಮಾಡಲಿ, ಇನ್ನಷ್ಟು ಅಭಿವೃದ್ಧಿ ಪಡಿಸಲಿ ಎನ್ನುವುದು ಮಾವಿನಗುಂಡಿ ಗ್ರಾಮಸ್ಥರ ಆಶಯವಾಗಿದೆ.

Saturday, 11 August 2012


ಸೌಮ್ಯ ನಡಿಗೆಯ `ಶ್ವೇತನಾರಿ'

  • August 11, 2012
  • Share  
  • [-]
  • Text
  • [+]


ಮಾವಿನ ಗುಂಡಿ ಜಲಪಾತದ ಸುಂದರ ನೋಟ.
ಕಾರ್ಗಲ್: ಈ ಮಲೆನಾಡೇ ಹೀಗೆ. ಒಂದಕ್ಕಿಂತ ಇನ್ನೊಂದು ಭಿನ್ನ. ಇದಕ್ಕಿಂತ ಅದು ಸುಂದರ, ಅದಕ್ಕಿಂತ ಇದು ಸೊಗಸು...

ಏನೆಲ್ಲಾ ಚೆಲುವನ್ನು ತನ್ನಲ್ಲಿ ಅಡಗಿಸಿಕೊಂಡಿರುವ, ಮೈ-ಮನಕ್ಕೆ ಮುದ ನೀಡುವ ಕಾನನದಲ್ಲಿ ಸೌಮ್ಯ ನಡಿಗೆಯಿಂದ ಬಳುಕುತ್ತಾ ಸಾಗುತ್ತಿರುವ `ಬಿಳಿನಾರಿ` ಎನ್ನಬಹುದಾದ ವೈಯಾರಿಯೇ `ಮಾವಿನ ಗುಂಡಿ ಜಲಪಾತ`.

-ಇದು ಜೋಗ ಜಲಪಾತದ ಪಕ್ಕ ಪ್ರವಾಸಿಗರನ್ನು ಸೆಳೆಯುತ್ತಿರುವ ಮತ್ತೊಂದು ಜಲಪಾತದ ಪರಿಚಯ.
ಆಶ್ಲೇಷ ಮಳೆಯ ಅಬ್ಬರಕ್ಕೆ ಜೋಗ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕುತ್ತಾ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದರೆ, ಜಲಪಾತದಿಂದ ಕೊಂಚ ದೂರದಲ್ಲಿರುವ ಮಾವಿನ ಗುಂಡಿ ಜಲಪಾತ ಅರ್ಭಟವಿಲ್ಲದೇ ಮೈದುಂಬಿಕೊಂಡು ಸೌಮ್ಯವಾಗಿ ಶರಾವತಿ ಕಣಿವೆಯೊಳಗೆ ಜಾರುತ್ತಾ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಜೋಗ ಜಲಪಾತಕ್ಕಿಂತ ತುಸು ಎತ್ತರ ಎಂದರೆ ತಪ್ಪಾಗಲಿಕ್ಕಿಲ್ಲವೇನೋ ಈ ಮಾವಿನ ಗುಂಡಿ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಮಾವಿನ ಗುಂಡಿ ಗ್ರಾಮದ ಸುತ್ತಮುತ್ತಲು ಸುರಿಯುವ ಮಳೆ ನೀರು ಒಂದೆಡೆ ಸೇರಿಕೊಂಡು ನದಿಯಂತೆ ಹರಿದು ಬಂದು, ಒಮ್ಮೆಲೆ ಶರಾವತಿ ಕಣಿವೆಯ ಶಿಖರ ಪ್ರದೇಶದಿಂದ ನುಣುಪಾದ ಹೆಬ್ಬಂಡೆಗಳ ಮೇಲೆ ಬಳುಕುತ್ತಾ ನಲಿಯುತ್ತಾ ಬಿಳಿ ಹಾಲ್ನೊರೆಯನ್ನು ಚೆಲ್ಲುತ್ತದೆ.

ಹೀಗೆ, ಹಾಲ್ನೊರೆಯಂತೆ ಜಾರಿ ಬಂದು ಕಣಿವೆಯ ಆಳದಲ್ಲಿ ಶರಾವತಿ ನದಿಯೊಂದಿಗೆ ಲೀನವಾಗುವ ಈ ಜಲಪಾತ, ಅಪ್ಪಟ `ಬಿಳಿನಾರಿ`ಯ ರೂಪದಲ್ಲಿ ಕಂಡು ಬರುವುದೇ ಇದರ ವಿಶೇಷ.

ಮಾವಿನ ಗುಂಡಿ ಜಲಪಾತವನ್ನು ಕೆಪ್ಪೆ ಜೋಗ ಜಲಪಾತ ಎಂದು ಕರೆಯುತ್ತಾರೆ. ಮತ್ತೆ ಕೆಲವರು ಗೇರುಸೊಪ್ಪ ಜಲಪಾತ ಎಂದು ಕರೆಯುವುದುಂಟು.

ಜೋಗಕ್ಕೆ ಬರುವ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುತ್ತಿರುವ ಈ ಜಲಪಾತ ಮಳೆಗಾಲ ಮುಗಿಯುವವರೆಗೂ ಪ್ರವಾಸಿಗರ ಮನತಣಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಇಲ್ಲಿನ ಪ್ರವಾಸಿ ಗೈಡ್ ವೇಲುಸ್ವಾಮಿ ಅಭಿಪ್ರಾಯಪಡುತ್ತಾರೆ.

Friday, 3 August 2012


ಕಣ್ಮನ ಸೆಳೆಯುವ ಅಪರೂಪದ ಪತಂಗ

  • July 31, 2012
  • Share  
  • [-]
  • Text
  • [+]

ಶರಾವತಿ ಕಣಿವೆಯಲ್ಲಿ ಕಂಡು ಬರುತ್ತಿರುವ ಅಪರೂಪದ ಪತಂಗ.
ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆ ಮತ್ತು ಬಿಸಿಲಿನ ಕಾಲಮಾನಗಳ ಬದಲಾವಣೆಯ ನಡುವೆ ಬಹುಅಪರೂಪದ ಅಸಹಜ ಗಾತ್ರದ ಪತಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಇವುಗಳು ಜತೆಜತೆಗೆ ಜೋಡಿಯಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಸುಂದರ ಹೂವುಗಳ ಮೇಲೆ ಕೂರುತ್ತಾ ಹಾರಿ ಹೋಗುವುದನ್ನು ಪರಿಸರಾಸಕ್ತರು ಕುತೂಹಲದಿಂದ ನೋಡಿ ಮನತಣಿಸಿಕೊಳ್ಳುತ್ತಿದ್ದಾರೆ.

ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುವ ಜೀವ-ಜಗತ್ತಿನ ವಿಸ್ಮಯಗಳಲ್ಲಿ ಚಿಟ್ಟೆಯ ಸಂಕುಲಗಳು ಒಂದು ಭಾಗವಾಗಿದೆ ಎಂದು ಶರಾವತಿ ವನ್ಯಜೀವಿ ಅಭಯಾರಣ್ಯದ ವಲಯಾರಣ್ಯಾಧಿಕಾರಿ ಆರ್.ಡಿ. ಪುಟ್ನಳ್ಳಿ ಹೇಳುತ್ತಾರೆ.

ಮಳೆ ಮತ್ತು ಬಿಸಿಲು ಜತೆಜತೆಯಾಗಿ ಬರುವಾಗ ಅರಳಿ ನಿಂತ ಹೂವುಗಳು ಈ ಪತಂಗಗಳನ್ನು ಆಕರ್ಷಿಸುತ್ತವೆ. ಈ ಸಂದರ್ಭದಲ್ಲಿ ಚಿಟ್ಟೆ ಸಂತತಿಗಳು ಪ್ರಕೃತಿಯ ಸಹಜ ಕರೆಗಳಲ್ಲಿ ಭಾಗಿಯಾಗಿ ವಂಶವೃದ್ಧಿಯಲ್ಲಿ ತೊಡಗುವುದು ಅವುಗಳ ಜೀವನ ಕ್ರಮದ ಭಾಗ ಎನ್ನುತ್ತಾರೆ ಅವರು.

ಅಪರೂಪದ ಈ ಪತಂಗಗಳು ಕೀಟವರ್ಗಕ್ಕೆ ಸೇರಿದ್ದಾಗಿದ್ದು, ಜಗತ್ತಿನಲ್ಲಿ ಸುಮಾರು 24 ಸಾವಿರ ಜಾತಿ ಚಿಟ್ಟೆ ಪ್ರಬೇಧಗಳು ಇದೆ ಎಂಬುದನ್ನು ಅಮೆರಿಕಾದ ಸಂಶೋಧಕರು ಅಂತರ್ಜಾಲದಲ್ಲಿ ದೃಢಪಡಿಸಿದ್ದಾರೆ ಎಂದು ಪರಿಸರ ಪ್ರೇಮಿ ನರೇಂದ್ರ ರಾಜ್ ಪಟೇಲ್ ತಿಳಿಸುತ್ತಾರೆ.

ಶರಾವತಿ ಕಣಿವೆಯಲ್ಲಿ ಕಂಡುಬರುವ ಅಪರೂಪದ ಬೃಹತ್ ಪತಂಗಗಳಿಗೆ `ಸಿಲ್ವರ್‌ಸ್ಪಾಟೆಡ್ ಇನ್‌ಸೆಕ್ಟ` ಎಂಬುದು ವೈಜ್ಞಾನಿಕ ಹೆಸರಾಗಿದೆ. ಇವುಗಳು ಹೆಚ್ಚಾಗಿ ಕೊಡಚಾದ್ರಿ ಬೆಟ್ಟಗಳ ತಪ್ಪಲಿನಲ್ಲಿ ಇರುವ ಕೊಲ್ಲೂರು ಚಿಟ್ಟೆವನದಲ್ಲಿ ಕಂಡು ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.

Tuesday, 31 July 2012


ಜೋಗ: ಪ್ರತಿದಿನ ಸಂಗೀತ ಕಾರಂಜಿ, ಲೇಸರ್ ಷೋ

  • June 22, 2012
  • Share  
  • [-]
  • Text
  • [+]

ಕಾರ್ಗಲ್ (ಶಿವಮೊಗ್ಗ ಜಿಲ್ಲೆ): ವಿಶ್ವವಿಖ್ಯಾತ ಜೋಗ ಜಲಪಾತ ಈಚೆಗೆ ನೀರಿನ ಕೊರತೆಯಿಂದ ಸೊರಗುತ್ತಿದ್ದರೂ ಜೋಗ ಅಭಿವೃದ್ಧಿ ಪ್ರಾಧಿಕಾರವು ಜೋಗವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹೊಸದಾಗಿ ಆರಂಭಿಸಿರುವ ಸಂಗೀತ ನೃತ್ಯ ಕಾರಂಜಿ ಮತ್ತು ಲೇಸರ್ ಷೋ ಪ್ರವಾಸಿಗರನ್ನು ನಿರೀಕ್ಷೆಗೂ ಮೀರಿ ಸೆಳೆಯುತ್ತಿದೆ.

ಪ್ರತಿದಿನ ರಾತ್ರಿ 7.30ರಿಂದ 8ರವರೆಗೆ ನಡೆಯುವ ಈ ಕಾರ್ಯಕ್ರಮ ಪ್ರವಾಸಿಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ರೂ 1.25 ಕೋಟಿ ವೆಚ್ಚವಾಗಿದೆ. ಕೋಲ್ಕತ್ತ ಮೂಲದ ಪ್ರೀಮಿಯರ್ ಲೀಗ್ ಕಂಪೆನಿಯು ನೂತನ ತಂತ್ರಜ್ಞಾನದಿಂದ ಇದನ್ನು ನಿರ್ಮಿಸಿದೆ. ಸಂಪೂರ್ಣ ಕಂಪ್ಯೂಟರೀಕೃತ ಸಂಯೋಜನೆಯೊಂದಿಗೆ ವಿನ್ಯಾಸಗೊಳಿಸಿರುವ ನೃತ್ಯ ಕಾರಂಜಿಯನ್ನು 5 ಮಾದರಿಯಾಗಿ  ಜೋಡಿಸಿದ್ದಾರೆ.

ಉಚಿತ ಪ್ರವೇಶ: ಈ ಎಲ್ಲಾ ಕಾರ್ಯಕ್ರಮ ವೀಕ್ಷಿಸಲು ಪ್ರವೇಶ ಉಚಿತ.  ವಿಶಾಲವಾದ ಬಯಲಿನಲ್ಲಿ ಒಳಾಂಗಣ ಸ್ಟೇಡಿಯಂ ಮಾದರಿಯಲ್ಲಿ ಕಲ್ಲು ಬೆಂಚುಗಳನ್ನು ಜೋಡಿಸಲಾಗಿದೆ. ಏಕಕಾಲಕ್ಕೆ ಒಂದು ಸಾವಿರ ಜನರು ಕುಳಿತು ಈ ಸಂಗೀತ ಕಾರಂಜಿ ಮತ್ತು ಲೇಸರ್ ಷೋ ವೀಕ್ಷಿಸಬಹುದು.
 

ಮೈದುಂಬಿದ ಸೌಂದರ್ಯ ಜೋಗದ ವೈಭವ

  • July 08, 2012
  • Share  
  • [-]
  • Text
  • [+]

ಕಾರ್ಗಲ್ ಸಮೀಪ ಜೋಗ ಜಲಪಾತದ ಪ್ರಕೃತಿ ವೈಭವ ಮರಳಿ ಪಡೆಯುತ್ತಿದ್ದು, ಈಚೆಗೆ ಮಳೆ ಬಿಸಿಲಿನ ನಡುವೆ ಜಲಪಾತ ಕಂಡು ಬಂದದ್ದು ಹೀಗೆ.
ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ಮುಂಗಾರು ಮಳೆಯ ಆರಂಭದೊಂದಿಗೆ ತನ್ನ ಪ್ರಕೃತಿದತ್ತ ಸೌಂದರ್ಯ ಮೈದುಂಬಿಕೊಂಡು, ಧುಮುಕುತ್ತಾ ನಿಸರ್ಗದ ಮಡಿಲಿನಲ್ಲೆಗ ಅದ್ಭುತ ಮುಕುಟದಂತೆ ಕಂಗೊಳಿಸುತ್ತಿದೆ.

ಒಣಗಿ ನಿಂತ ಬಂಡೆಗಳ ಮೇಲೆಲ್ಲಾ ಹಸಿರು ಪಾಚಿ ಹುಲ್ಲು ಬೆಳೆದು, ಸುತ್ತಲಿನ ಪರಿಸರದ ಗಿಡ-ಮರಗಳ ನಡುವೆ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಮುಸುಕಿದ ಮಂಜಿನ ನಡುವೆ ಹಾಲ್ನೊರೆ ಚೆಲ್ಲುತ್ತಾ ರಾಜ, ರಾಣಿ, ರೋರರ್, ರಾಕೆಟ್ ಕವಲುಗಳು ಕಣಿವೆಯೊಳಗೆ ಧುಮ್ಮುಕ್ಕುವ ದೃಶ್ಯ ನೋಡಲು ಅವರ್ಣನೀಯ ಎನ್ನುವುದು ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗಳ ಅಭಿಮತ. 

ಅತ್ತ ಭೋರ್ಗರೆತವೂ ಇಲ್ಲದೇ, ಇತ್ತ ನೀರವತೆಯೂ ಇಲ್ಲದೇ, ಗಾಂಭೀರ್ಯದಿಂದ ಬಳುಕುತ್ತಾ ಧರೆಗೆ ಇಳಿಯುವ ಶರಾವತಿಯ ಸೌಂದರ್ಯ ಆಸ್ವಾದನೆಗೆ ಇದು ಸಕಾಲ ಎಂಬುದು ಇಲ್ಲಿನ ಪ್ರವಾಸಿ ಮಾರ್ಗದರ್ಶಕರ (ಗೈಡ್) ಅನಿಸಿಕೆ.

ಜಲಪಾತದ ಕೆಳಭಾಗಕ್ಕಿಳಿದು ಇಳಿದು ಸ್ನಾನ ಮಾಡಿ ದಣಿವಾರಿಸಿಕೊಳ್ಳುವ ಪ್ರವಾಸಿಗರು, ಸಂಜೆಯಾಗುತ್ತಿದ್ದಂತೆ ಸಂಗೀತ ಕಾರಂಜಿಯ ನರ್ತನದ ಸೊಬಗು ಸವಿದು, ಉಲ್ಲಸಿತರಾಗುತ್ತಿದ್ದಾರೆ.