Friday, 20 September 2013




ಕಾರ್ಗಲ್: ಐತಿಹಾಸಿಕ ಮತ್ತು ಪಾರಂಪರಿಕವಾಗಿ ಜೋಗ ಜಲಪಾತದ ಎದುರಿನಲ್ಲಿ ನೆಲೆನಿಂತಿರುವ ಮೈಸೂರು ಬಂಗಲೆ ಪ್ರವಾಸಿಗರಿಗೆ ಜಲಪಾತದ ಸವಿಯನ್ನು ಉಣಬಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.  ಸುಮಾರು 4ದಶಕಗಳಿಂದ ನಿರ್ವಹಿಸಿಕೊಂಡು ಬಂದಿರುವ ಕೆಪಿಸಿಗೆ ಇದು ಹೆಮ್ಮೆ ಮತ್ತು ಹೆಗ್ಗಳಿಕೆಯಾಗಿತ್ತು.
ಆದರೆ, ಈಚೆಗೆ ಜೋಗ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳಿಂದ, ನಿರ್ವಹಣೆ ಹೊಣೆ ಕೆಪಿಸಿಯ ಕೈತಪ್ಪಲಿದೆಯೇ ಎಂಬ ಪ್ರಶ್ನೆ ಈ ಭಾಗದ ಜನರನ್ನು ಕಾಡುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೋಡಿದವರು ಇಲ್ಲಿನ ಮೈಸೂರು ಬಂಗಲೆಯನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಜಲಪಾತದ ಸಂಪೂರ್ಣ ಸೌಂದರ್ಯವನ್ನು ಸವಿಯಬೇಕಾದರೆ ಮೈಸೂರು ಬಂಗಲೆಯ ಮುಂಭಾಗದಲ್ಲಿ ನಿಂತು ನೋಡಲೇ ಬೇಕು. ಮೈಸೂರು ಬಂಗಲೆಯಂಥ ವೀಕ್ಷಣಾ ಪ್ರದೇಶ ಇರುವ ಏಕೈಕ ಕಾರಣಕ್ಕೆ ಮಾತ್ರ ಜಲಪಾತದ ಅದ್ಭುತ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಸಾಧ್ಯ ಎಂಬುದು ಪ್ರವಾಸಿಗರು ಮತ್ತು ಪ್ರಕೃತಿ ಆಸ್ವಾದಕರ ಅಭಿಪ್ರಾಯ.
1886ರಲ್ಲಿ ಮೈಸೂರು ಅರಸರು ಕಟ್ಟಿಸಿರುವ ಈ ಬಂಗಲೆಯಲ್ಲಿ ಮಹಾರಾಜರ ಆದಿಯಾಗಿ, ಬ್ರಿಟೀಷ್ ವೈಸ್‌ರಾಯ್‌ ಗಳು, ಸೇನಾಪತಿಗಳು, ಗಣ್ಯಾತಿಗಣ್ಯರು ಸೇರಿದಂತೆ ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರಿಂದ ಹಿಡಿದು ಮಾಜಿ ರಾಷ್ಟ್ರಪತಿಗಳಾದ ದಿ. ವೆಂಕಟರಾಮನ್ ಅವರೂ ಕೂಡ ಬಂದು ಇಲ್ಲಿನ ಬಂಗಲೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂಬುದು ಈ ಬಂಗಲೆಯ ವಿಶೇಷ. ಇಷ್ಟೊಂದು ಮಹತ್ವಪೂರ್ಣವಾದ ಬಂಗಲೆಯನ್ನು ಸ್ವಾತಂತ್ರ್ಯ ನಂತರ 4ದಶಕಗಳ ಕಾಲ ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡ ಬಂದ ಹೆಗ್ಗಳಿಕೆ ಕೆಪಿಸಿ ಇಲಾಖೆಗೆ ಸೇರಿದೆ. ಆದರೆ ಕೆಪಿಸಿಯ ನಿರ್ವಹಣೆ ಮತ್ತು ಒಡೆತನದಿಂದ ಈ ಬಂಗಲೆ ಕೈ ತಪ್ಪುವ ಲಕ್ಷಣಗಳು ಕಂಡು ಬಂದಿದೆ.
ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಆಳ್ವಿಕೆಯಲ್ಲಿ ಜೋಗ ಜಲಪಾತದ ಕಣಿವೆ ಮುಂಬಯಿ ಪ್ರಾಂತ್ಯ ಮತ್ತು ಮೈಸೂರು ಪ್ರಾಂತ್ಯದ ಗಡಿಭಾಗವಾಗಿದ್ದ ಕಾರಣ ಕಣಿವೆಯ ಎರಡು ದಂಡೆಗಳಲ್ಲಿರುವ ವಿಶ್ರಾಂತಿ ಗೃಹಗಳು 2ಪ್ರಾಂತ್ಯದ ಹೆಸರಿನಲ್ಲಿ ಗುರುತಿಸಲ್ಪಟ್ಟಿತ್ತು. ರಾಜಾ, ರೋರರ್ ಫಾಲ್ಸ್ ಮತ್ತು ಬ್ರಿಟಿಷ್ ಬಂಗಲೆಯನ್ನು ಒಳಗೊಂಡ ಪ್ರದೇಶ ಕಾರವಾರ ಜಿಲ್ಲೆಯ ಗಡಿಗೆ ಸೇರಿದ್ದಾದರೆ, ರಾಕೆಟ್ ರಾಣಿ ಫಾಲ್ಸ್ ಮತ್ತು ಮೈಸೂರು ಬಂಗಲೆಯನ್ನು ಒಳಗೊಂಡ ಪ್ರದೇಶ ಶಿವಮೊಗ್ಗ ಜಿಲ್ಲೆಯ ಗಡಿಗೆ ಸೇರಿದ್ದಾಗಿದೆ. ಮುಂಬೈ ಬಂಗಲೆಯನ್ನು ಬ್ರಿಟಿಷ್‌ ಆಡಳಿತ ನಿರ್ಮಾಣ ಮಾಡಿದ್ದರೆ, ಮೈಸೂರು ಬಂಗಲೆಯನ್ನು ಮಹಾರಾಜರು ಕಟ್ಟಿಸಿದ್ದು ಎಂಬ ಖ್ಯಾತಿಯಿದೆ.
ಸ್ವಾತಂತ್ರ್ಯ ನಂತರ ಮೈಸೂರು ಬಂಗಲೆ ಲೋಕೋಪಯೋಗಿ ಇಲಾಖೆಯ ನಿರ್ವಹಣೆಗೆ ಒಳಪಟ್ಟಿತ್ತು. ಬದಲಾದ ಕಾಲಘಟ್ಟದಲ್ಲಿ ಮೈಸೂರು ಪವರ್ ಕಾರ್ಪೋರೇಷನ್ ಎಂಬ ಅರೆ ಸರ್ಕಾರಿ ಸಂಸ್ಥೆ ಉದಯವಾದಾಗ ಈ ಬಂಗಲೆ ಕಾರ್ಪೋರೇಶನ್ ಒಡೆತನಕ್ಕೆ ವರ್ಗವಾಗಿತ್ತು. ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಆದಾಗ, ಪವರ್ ಕಾರ್ಪೋರೇಷನ್ ಹೆಸರೂ ಕೂಡ  ಕರ್ನಾಟಕ ಪವರ್ ಕಾರ್ಪೋರೇಷನ್ ಎಂದು ಬದಲಾಗಿ ಸದರಿ ಬಂಗಲೆಯನ್ನು ಕೆಪಿಸಿ ಗೆಸ್ಟ್ ಹೌಸ್ ಎಂದು ಕರೆಯಲಾಗುತ್ತಿದೆ.
ಈಚೆಗೆ ನಡೆದ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆ ಮತ್ತು ಪ್ರಾಧಿಕಾರದ ರೂವಾರಿಯಾಗಿರುವ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಮಂಡಿಸಿರುವ ಅಭಿವೃದ್ಧಿ ಪಥದ ಮಾರ್ಗದಲ್ಲಿರುವ ಪ್ರಮುಖ ಅಂಶಗಳಲ್ಲಿ ಜೋಗ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಾಡ್ಜ್‌ಗಳು, ಅತಿಥಿ ಗೃಹಗಳು, ಹೋಟೆಲ್ ಮತ್ತಿತರರ ಪ್ರಮುಖ ಕಟ್ಟಡಗಳನ್ನು ಪ್ರಾಧಿಕಾರದ ನಿರ್ವಹಣಾ ವ್ಯಾಪ್ತಿಗೆ ಒಳಪಡಿಸಬೇಕು  ಎಂಬುದು ಒಂದಾಗಿದೆ.
ಈ ವಿಷಯದ ಮೇಲೆ ಚರ್ಚೆಯಾದಾಗ ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕಾಂಬಳೆ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.  ವಿಷಯದ ಮೇಲೆ ಸಭೆ ಸಹಮತ ಸೂಚಿಸಿ ಸರ್ವಾನುಮತದಿಂದ ಪ್ರಮುಖ ನಿರ್ಣಯಗಳಿಗೆ ಒಪ್ಪಿಗೆ ಪಡೆದಿದೆ. ಈ ನಿಟ್ಟಿನಲ್ಲಿ ಅವಲೋಕನ ನಡೆಸಿದಾಗ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿಯಲ್ಲಿರುವ ಕೆಪಿಸಿ ಗೆಸ್ಟ್ ಹೌಸ್‌ ಕೆಪಿಸಿ ನಿರ್ವಹಣೆಯಿಂದ ಕೈತಪ್ಪಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

Wednesday, 10 July 2013



ಶಿಕ್ಷೆಗೊಳಗಾದ ದಿನದಿಂದಲೇ ಸಂಸದ, ಶಾಸಕರು ಅನರ್ಹರು: ಸುಪ್ರೀಂ

ನವದೆಹಲಿ (ಪಿಟಿಐ): ತಮ್ಮ ಶಿಕ್ಷೆಯ ವಿರುದ್ಧ ಮೇಲಿನ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೇಲ್ಮನವಿ ಇತ್ಯರ್ಥಕ್ಕಾಗಿ ಬಾಕಿ ಇರುವ ನೆಲೆಯಲ್ಲಿ ಶಿಕ್ಷಿತ ಶಾಸನಕರ್ತರನ್ನು ಅನರ್ಹಗೊಳಿಸದಂತೆ  ಜನತಾ  ಪ್ರಾತಿನಿಧ್ಯ ಕಾಯ್ದೆಯಲ್ಲಿ ಒದಗಿಸಲಾಗಿರುವ ವಿಧಿಯು 'ಅಸಿಂಧು' ಎಂದು ಬುಧವಾರ ಘೋಷಿಸಿದ ಸುಪ್ರೀಂಕೋರ್ಟ್ ಈ ವಿಧಿಯನ್ನು ರದ್ದುಪಡಿಸಿತು.
'ಇರುವ ಏಕೈಕ ಪ್ರಶ್ನೆ ಏನೆಂದರೆ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(4)ರ ಸಿಂಧುತ್ವಕ್ಕೆ ಸಂಬಂಧಿಸಿದ್ದು. ನಾವು ಇದನ್ನು ಅಸಿಂಧು ಎಂಬುದಾಗಿ ಘೋಷಿಸುತ್ತಿದ್ದೇವೆ. ಮತ್ತು ಅನರ್ಹತೆಯು ಶಿಕ್ಷೆಗೆ ಒಳಗಾದ ದಿನಾಂಕದಿಂದಲೇ ಅನ್ವಯವಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಹೇಳಿದರು.
ಏನಿದ್ದರೂ ತನ್ನ ನಿರ್ಣಯವು ಈ ತೀರ್ಪಿನ ಪ್ರಕಟಣೆಗೆ ಮುನ್ನ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದ ಸಂಸತ್ ಸದಸ್ಯರು, ಶಾಸಕರು ಅಥವಾ ಇತರ ಶಾಸನಕರ್ತರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.
ಲಿಲಿ ಥಾಮಸ್ ಮತ್ತು ಸರ್ಕಾರೇತರ ಸಂಘಟನೆ ಲೋಕ್ ಪ್ರಹರಿ ಕಾರ್ಯದರ್ಶಿ ಎಸ್.ಎನ್ ಶುಕ್ಲ  ಅವರು ಜನತಾ ಪ್ರಾನಿನಿಧ್ಯ ಕಾಯ್ದೆಯ ವಿವಿಧ ವಿಧಿಗಳನ್ನು ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು.
ಕಾಯ್ದೆಯ ಉಲ್ಲೇಖಿತ ವಿಧಿಗಳು ಅಪರಾಧಿಗಳಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಇಲ್ಲವೇ ಸಂಸತ್ ಸದಸ್ಯರು ಅಥವಾ ಶಾಸಕರಾಗಲು ಬಹಿರಂಗವಾಗಿ ತಡೆ ಹಾಕುವ ಕೆಲವೊಂದು ಸಂವಿಧಾನಾತ್ಮಕ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂಬ ನೆಲೆಯಲ್ಲಿ ಅರ್ಜಿದಾರರು ಈ ವಿಧಿಗಳನ್ನು ರದ್ದು ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು






ಜಲಪಾತ ವೀಕ್ಷಣೆಗೆ ಹರಿದು ಬಂದ ಜನಸಾಗರ

ಕಾರ್ಗಲ್: ಸಮೀಪದ ವಿಶ್ವವಿಖ್ಯಾತ ಜೋಗ ಜಲಪಾತದ ಸುತ್ತಮುತ್ತ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಹಚ್ಚ ಹಸಿರಿನ ವನರಾಶಿಗಳ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದ ಜಲಧಾರೆಯ ವೀಕ್ಷಣೆಗೆ ಪ್ರವಾಸಿಗರ ದಂಡು ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು.
ಜಲಪಾತದ ವಾಹನ ಪಾರ್ಕಿಂಗ್ ತಾಣ ಸೇರಿದಂತೆ, ಮುಂಬಯಿ ಬಂಗಲೆ ಪ್ರದೇಶ, ಮೈಸೂರು ಬಂಗಲೆ ಪ್ರದೇಶ, ಶಿರೂರು ಕೆರೆ ದಂಡೆ, ರಾಣಿ ಜಲಪಾತದ ಪಾರ್ಕಿಂಗ್ ತಾಣದೆಲ್ಲೆಡೆ ಹೊರ ಊರುಗಳಿಂದ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡಿದ್ದ ಪರಿಣಾಮ ವಾಹನ ಸಂಚಾರಕ್ಕೆ ತಡೆ ಯುಂಟಾಗಿತ್ತು. ಜೋಗದ ಪೋಲೀಸರು ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಹರಸಾಹಸ ಪಟ್ಟರು.
ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಮದ್ಯಪಾನಿಗಳು ಹಲ್ಲೆ ನಡೆಸಿದ ಘಟನೆಯೂ ನಡೆದಿದೆ. ಕೂಡಲೇ ಎಚ್ಚೆತ್ತ ಪೊಲೀಸ್ ಇಲಾಖೆ ನಾಲ್ವರನ್ನು   ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡರು

Saturday, 15 June 2013


ಜೋಗ ಜಲಪಾತಕ್ಕೆ ಮತ್ತೆ ಕಳೆ

ಕಾರ್ಗಲ್: ಶರಾವತಿ ಕಣಿವೆಯಲ್ಲಿ ಪ್ರವೇಶವಾಗಿರುವ ಮುಂಗಾರು ಮಳೆಯಿಂದ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವ ಮರುಕಳಿಸಿದೆ. ಜಲಪಾತ ಎರಡು ದಿನಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.
ಮಳೆಯ ಅಭಾವದಿಂದ ಜಲಪಾತವು ಸಂಪೂರ್ಣ ಕಳೆಗುಂದಿ ಈಚಿನ ದಿನಗಳಲ್ಲಿ  ಬೋರ್‌ಬಂಡೆಗಳ ದರ್ಶನ ಮಾತ್ರ ಆಗುತ್ತಿತ್ತು. ಆದರೆ ಕಳೆದ 48 ಗಂಟೆಗಳಲ್ಲಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶದ ಸುತ್ತಮುತ್ತ 80 ಮಿ.ಮೀ. ಮಳೆಯಾಗಿದ್ದು ಜಲಪಾತದ ಟಿಸಿಲುಗಳಾದ ರಾಜಾ, ರೋರರ್, ರಾಕೆಟ್, ರಾಣಿ ನಿಧಾನವಾಗಿ ಮೈದುಂಬಿ ಹಾಲ್ನೊರೆಯನ್ನು ಚೆಲ್ಲುತ್ತಾ ಧುಮ್ಮಿಕ್ಕುವ ಸುಂದರ ದೃಶ್ಯವನ್ನು ಸ್ಥಳೀಯರು ಮತ್ತು  ಪ್ರವಾಸಿಗರು ಶನಿವಾರ ಸವಿಯುತ್ತಿರುವುದು ಕಂಡು ಬಂದಿದೆ.
ಜಲಪಾತದ ಆಳದಿಂದ ಮೇಲೇಳುವ ಮಂಜು ಕಾರ್ಮೋಡಗಳೊಂದಿಗೆ ಬೆರೆತು ಆಕಾಶ- ಭೂಮಿ ಒಂದಾಗಿ ಬೆರೆತಂತೆ ಭಾಸವಾಗುವ ಸನ್ನಿವೇಶ ಸೃಷ್ಟಿಸಿತ್ತು. ಮಂಜು ಅಲ್ಲಲ್ಲಿ ತೇಲಿ ಮರೆಯಾಗಿ ಜಲಪಾತದ ಒಂದೊಂದು ಮಗ್ಗಲುಗಳು ವಿವಿಧ ಕೋನಗಳಲ್ಲಿ ಗೋಚರವಾಗುತ್ತಾ ಕಣ್ಣಾಮುಚ್ಚಾಲೆ ಆಡುತ್ತಿರುವ ದೃಶ್ಯ ಪ್ರವಾಸಿಗರಿಗೆ ಮುದ ನೀಡುತ್ತಿತ್ತು.